ಮಂಡ್ಯ:ಸಂಸದೆಸುಮಲತಾ ಅಂಬರೀಶ್ ಅವರ ಅನೈತಿಕ ಬೆಂಬಲದಿಂದಾಗಿ ಮೇಲುಕೋಟೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ವಿರುದ್ಧ ಮೇಲುಕೋಟೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಪಾಂಡವಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ ನನಗೆ 38 ಸಾವಿರ ಮತಗಳು ಬರುತ್ತದೆ ಎಂಬ ಮಾಹಿತಿ ಇತ್ತು. ಆದರೆ ಸುಮಲತಾ ಅವರು ರೈತ ಸಂಘದ ಅಭ್ಯರ್ಥಿ ದರ್ಶನ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಹೇಳಿಕೆ ಕೊಟ್ಟ ಬಳಿಕ ಕ್ಷೇತ್ರದಲ್ಲಿ ವಿಚಿತ್ರ ಬದಲಾವಣೆ ಆಗಿದ್ದನ್ನು ನಾನು ನೋಡಿದ್ದೇನೆ. ಎಲ್ಲಿ ಪುಟ್ಟರಾಜು ಮತ್ತೆ ಗೆಲ್ತಾರೋ, ಜೆಡಿಎಸ್ ಮತ್ತೆ ಗೆಲ್ಲುತ್ತೋ ಅನ್ನೊ ಭಯದಿಂದ ವೋಟ್ನ ಪ್ರಮಾಣ ನನಗೆ ಕಡಿಮೆ ಆಗಿದೆ. ಕ್ಷೇತ್ರದ ಜನರು ನನ್ನ ಬಳಿಯೇ ನೇರವಾಗಿ ಬಂದು ಈ ಬಾರಿ ದರ್ಶನ್ ಪುಟ್ಟಣ್ಣಯ್ಯಗೆ ವೋಟ್ ಹಾಕುತ್ತೇವೆ ದಯಮಾಡಿ ಕ್ಷಮಿಸಿ ಎಂದು ಹೇಳಿದ್ದರು ಅಂದರು.
ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ಎಂದು ಹೇಳಿದ್ರು. ನಂತರ ದರ್ಶನ್ ಪುಟ್ಟಣ್ಣಯ್ಯ ಗೆಲ್ಲಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆಗೆ ನನ್ನ ಧಿಕ್ಕಾರ ಇದೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಸುಮಲತಾ ಮಾಡಿದ ಕೆಲಸವನ್ನ ನಮ್ಮ ಕಾರ್ಯಕರ್ತರು ಕೂಡ ಒಪ್ಪಲ್ಲ, ನಾನು ಕೂಡ ಒಪ್ಪಲ್ಲ. ಅವರು ಋಣ ತೀರಿಸುವ ಕೆಲಸ ಮಾಡೋದಾಗಿದ್ದರೆ ಒಂದು ಪಕ್ಷಕ್ಕೆ ಬಂದ ಮೇಲೆ ಇನ್ನೊಂದು ಪಕ್ಷದ ಅಭ್ಯರ್ಥಿ ಪರ ಹೇಳಿಕೆ ಕೊಡೋದು ಖಂಡಿತ ತಪ್ಪು. ಇದನ್ನ ನಾನು ಖಂಡಿಸುತ್ತೇನೆ. ಈ ಬಗ್ಗೆ ಪಕ್ಷದ ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದು ಪರಾಜಿತ ಅಭ್ಯರ್ಥಿ ಡಾ. ಇಂದ್ರೇಶ್ ಅವರು ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದರು.