ಮಂಡ್ಯ:ಕೃಷ್ಣರಾಜಸಾಗರ ಅಣೆಕಟ್ಟಿನ ಸುರಕ್ಷತೆಗಾಗಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದೇ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರಿಗೂ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಚಿವ ಕೆ.ಸಿ ನಾರಾಯಣಗೌಡ ಸುದ್ದಿಗೋಷ್ಠಿ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಟ್ರಯಲ್ ಬ್ಲಾಸ್ಟ್ ನಡೆಸುವುದು, ಮತ್ತೆ ಅವಕಾಶ ಕೊಡುವುದು, ಮತ್ತೆ ಡ್ಯಾಂ ಭದ್ರತೆ ಚರ್ಚೆ ವಿಚಾರ ಬಂದಾಗ ಏನ್ ಮಾಡೋದು? ಎಂಬ ಮಾತುಗಳು ಬರುತ್ತವೆ. ಹಾಗಾಗಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಲು ಚಿಂತನೆ ಮಾಡಲಾಗಿದೆ ಎಂದರು.
ಗಣಿಗಾರಿಕೆ ಬಗ್ಗೆ ಕಣ್ಣಿಡಲು ಜಿಲ್ಲೆಯಲ್ಲಿ 8 ಚೆಕ್ಪೋಸ್ಟ್ಗಳನ್ನುನಿರ್ಮಾಣ ಮಾಡಲಾಗುವುದು. ಸಕ್ರಮ ಗಣಿಗಾರಿಕೆಗೆ ತಕರಾರು ಇಲ್ಲ. ಕಂದಾಯ, ಗಣಿ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಟಾಸ್ಕ್ ಫೋರ್ಸ್ ರಚನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ಡ್ಯಾಂ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ಮೂರು ವರದಿಗಳಿವೆ. ಸದ್ಯ ಡ್ಯಾಂಗೆ ಯಾವುದೇ ತೊಂದರೆ ಇಲ್ಲ. ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಈ ಬಗ್ಗೆ ವರದಿ ನೀಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಇದನ್ನೂ ಓದಿ:ಕೆಆರ್ಎಸ್ ಬಿರುಕು-ಅಕ್ರಮ ಗಣಿಗಾರಿಕೆ ಸದ್ದು: ಬೇಬಿ ಬೆಟ್ಟ, ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆಯ ಅಸಲಿಯತ್ತೇನು?