ಮಂಡ್ಯ:ಜಿಪಂ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ದಿಶಾ ಸಭೆ ನಡೆಯಿತು. ಈ ವೇಳೆ, ಸಭೆಯಲ್ಲಿ ಸಿಇಒ ಮತ್ತು ಶಾಸಕರ ನಡುವೆ ಜಟಾಪಟಿ ನಡೆಯಿತು.
ದಿಶಾ ಸಭೆಯಲ್ಲಿ ಸಿಇಒ - ಶಾಸಕರ ನಡುವೆ ಜಟಾಪಟಿ ಸಭೆ ಆರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ದಿಶಾ ಸಭೆಗೆ ವಿಧಾನ ಪರಿಷತ್ ಸದಸ್ಯರನ್ನು ಏಕೆ ಆಹ್ವಾನಿಸಿಲ್ಲ, ಈ ಹಿಂದಿನ ಸಂಸದರ ಸಭೆಯಲ್ಲಿ ನಮಗೆ ಆಹ್ವಾನ ಇತ್ತು. ಇಂದಿನ ಸಭೆಗೆ ನನ್ನನ್ನು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಗೈಡ್ಲೈನ್ನಲ್ಲಿ ಇರೋದನ್ನು ಮಾಡಿದ್ದೇನೆ ಎಂದು ಸಿಇಒ ಉತ್ತರಿಸಿದರು.
ಸಂಸದೆ, ಸಿಇಒ, ಎಸ್ಪಿಗೆ ರವೀಂದ್ರ ಶ್ರೀಕಂಠಯ್ಯ ತರಾಟೆ:
ಸಂಸದೆ ಸುಮಲತಾ ಅಂಬರೀಶ್, ಸಿಇಒ, ಎಸ್ಪಿಗೆ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡರು. ಸಭೆಗೆ ಸಂಬಂಧಿಸಿದ ಅನಧಿಕೃತ ವ್ಯಕ್ತಿಗಳನ್ನು ಹೊರಗೆ ಕಳುಹಿಸಿ ಎಂದು ಗುಡುಗಿದರು. ಈ ವೇಳೆ ಅನಧಿಕೃತ ವ್ಯಕ್ತಿಗಳು ಯಾರೂ ಇಲ್ಲ ಎಂದು ಸಿಇಒ ತಿಳಿಸಿದರು.
ಸಂಸದೆಗೆ ಶಾಸಕ ಕ್ಲಾಸ್:
KRS ಕುರಿತು ಕೆಲವೊಂದು ಗೌಪ್ಯ ವಿಚಾರಗಳು ಚರ್ಚೆಯಾಗಲಿವೆ. ಅನಧಿಕೃತ ವ್ಯಕ್ತಿಗಳು ಇಲ್ಲಿ ಇರಬಾರದು. ಅನಧಿಕೃತ ವ್ಯಕ್ತಿಗಳನ್ನು ಈ ಕೂಡಲೇ ಹೊರ ಕಳುಹಿಸಿ. ಶ್ರೀನಿವಾಸ್ ಭಟ್ ಎಂಬ ವ್ಯಕ್ತಿಯಿಂದ ಸಂಸದರ ಲೆಟರ್ ಹೆಡ್ ದುರ್ಬಳಕೆಯಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ ಮಾಡಿದರು. ನಿಮಗೆ ಇಷ್ಟ ಬಂದಂತೆ ಮಂಡ್ಯ ಕೊಂಡೊಯ್ಯೋಕೆ ನಾವು ಬಿಡಲ್ಲ ಎಂದು ಸಂಸದೆಗೆ ಶಾಸಕ ರವೀಂದ್ರ ತರಾಟೆಗೆ ತೆಗೆದುಕೊಂಡರು.
ದಿಶಾ ಸಭೆಯಲ್ಲಿ ಶಾಸಕ-ಸಿಇಒ ಜಟಾಪಟಿ:
ಈ ಸಭೆ ಮಾಡೋ ಅಧಿಕಾರ ಇದೆಯಾ ಎಂದು ರೈಟಿಂಗ್ನಲ್ಲಿ ನಾನು ಪತ್ರದ ಮೂಲಕ ಪ್ರಶ್ನೆ ಕೇಳಿದ್ದೀನಿ. ಇದಕ್ಕೆ ಮೊದಲು ನೀವು ಉತ್ತರ ಕೊಡಿ ಎಂದು ಸಿಇಒಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಮಾಡಿದರು.
ಸಭೆಗೆ ಸಂಸದರು ಅಧ್ಯಕ್ಷರಾಗಿರುತ್ತಾರೆ. ಸಂಸದರು ಸಭೆ ಕರೆಯುವಂತೆ ಹೇಳಿದಾಗ ನಾನು ಸಭೆ ಕರೆದಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನೆಗೆ ಕೇಂದ್ರ ಸೂಚಿಸಿದೆ. ಹೀಗಾಗಿ ಸಭೆ ಮಾಡ್ತಿದ್ದೀನಿ ಎಂದು ಸಿಇಒ ದಿವ್ಯಪ್ರಭು ಮರು ಉತ್ತರಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಪತ್ರದ ಮೂಲಕ ಉತ್ತರ ಕೊಡಿ ಎಂದು ಶಾಸಕರು ಒತ್ತಾಯಿಸಿದರು. ಇದಕ್ಕೆ ಪತ್ರದ ಮೂಲಕ ಉತ್ತರ ಕೊಡುವುದಾಗಿ ಸಿಇಒ ಹೇಳಿದರು.