ಮಂಡ್ಯ:ಬೆಳೆ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಭೇಟಿಯಾಗಿ ರೈತರೊಂದಿಗೆ ಮಾತುಕತೆ ನಡೆಸಿದರು.
ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಪರಮೇಶ್ವರ್, ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸದ ಬಗ್ಗೆ ರೈತರು ಅಸಮಧಾನ ಹೊರ ಹಾಕಿದರು. ಸಿಎಂ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನೀರು ಬಿಡಲು ಮನಸ್ಸು ಇಲ್ಲದೆ ಈ ಕಡೆ ತಲೆ ಹಾಕುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿ. ಪರಮೇಶ್ವರ್ ಬಳಿಕ ರೈತರೊಂದಿಗೆ ಮಾತುಕತೆ ನಂತರ ಮಾತನಾಡಿದ ಡಾ.ಜಿ.ಪರಮೇಶ್ವರ್, ಪೊಲೀಸರಿಂದ ಪ್ರತಿಭಟನೆ ಮಾಹಿತಿ ತಿಳಿಯಿತು. ನಿಮ್ಮ ಹೋರಾಟ, ಬೇಡಿಕೆ ರೈತ ಜನಪರವಾಗಿದೆ. ತೊಂದರೆ ಆಗದ ರೀತಿಯಲ್ಲಿ ಈ ಪ್ರತಿಭಟನೆ ಮಾಡ್ತಿದ್ದೀರಿ. ರಾಜ್ಯದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದರು. ಕಬ್ಬು ಬೆಳೆ, ಬೆಲೆ ಸರಿಯಾಗಿ ಸಿಗದಿರೋದು ಅದಕ್ಕೆ ಕಾರಣ. ರಾಹುಲ್ ಗಾಂಧಿ ಅವರು ಕೂಡ ಇಲ್ಲಿಗೆ ಬಂದಿದ್ದರು. ಅಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಮನವಿ ಮಾಡಿದರು.
ಈ ಬಾರಿ ಮುಂಗಾರು ತಡವಾಗಿರೋದು ದುರ್ದೈವದ ಸಂಗತಿ. ಈ ವೇಳೆಗಾಗಲೇ ಅಣೆಕಟ್ಟೆ ಭರ್ತಿ ಆಗಬೇಕಿತ್ತು. ಆದರೆ ಇಲ್ಲೂ ಮಳೆ ಇಲ್ಲ, ಕೊಡಗಲ್ಲೂ ಮಳೆ ಆಗಿಲ್ಲ. ರೈತರ ಬೆಳೆ ಕೊನೆ ಹಂತಕ್ಕೆ ಬಂದಿದೆ. ಆದರೆ ನೀರಿನ ಅಭಾವ ಎದುರಾಗಿದೆ. ಈ ಬಗ್ಗೆ ಸಿಎಂ, ನೀರಾವರಿ ಮಂತ್ರಿ ಬುದ್ಧಿವಂತಿಕೆಯಿಂದ ತೀರ್ಮಾನ ಮಾಡಬೇಕು ಎಂದರು.
ನಾಳೆ ದೆಹಲಿಯಲ್ಲಿ ಸಭೆ ಇದೆ. ಆದರೆ ಸಭೆಯಲ್ಲಿ ನಾಲೆಗಳಿಗೆ ನೀರು ಬಿಡುವ ವಿಷಯ ಇಲ್ಲ. ಆದರೂ ನಾಳೆ ಸಭೆಯಲ್ಲಿ ತುರ್ತು ವಿಚಾರವಾಗಿ ಈ ವಿಷಯ ಪ್ರಸ್ತಾಪ ಆಗಿ, ಚರ್ಚೆ ಮಾಡಬೇಕು. ಕಮಿಟಿ ಸದಸ್ಯರ ಮನವೊಲಿಸಬೇಕಿದೆ. ಇವತ್ತು, ನಾಳೆಯೊಳಗೆ ತೀರ್ಮಾನ ಕೈಗೊಳ್ಳಬೇಕು. ನಿಮ್ಮ ಪರವಾಗಿ ಸಿಎಂ, ನೀರಾವರಿ ಸಚಿವರನ್ನ ಒತ್ತಾಯಿಸ್ತೇನೆ. ಸರ್ಕಾರ ಇದನ್ನ ಲಘುವಾಗಿ ತೆಗೆದುಕೊಳ್ಳಲ್ಲ. ಈಗಲೇ ನಾನು ಸಿಎಂ ಅವರಿಗೆ ಇಲ್ಲಿನ ವಾಸ್ತವ ಸ್ಥಿತಿ ತಿಳಿಸ್ತೇನೆ. ಕಾನೂನಾತ್ಮಕವಾಗಿ ನಾಳೆ ಸಂಜೆಯೊಳಗೆ ನಿರ್ಧಾರಕ್ಕೆ ಬರುವಂತೆ ಮನವಿ ಮಾಡ್ತೀನಿ ಎಂದರು.