ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ಮಾತಿನ ಸಮರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಸಲಹೆ ನೀಡಿದ್ದು, ಟೀಕೆಗಳು ಆರೋಗ್ಯಕರವಾಗಿರಬೇಕು, ಅಶ್ಲೀಲವಾಗಿರಬಾರದು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಪ್ಪುಗಳು ಕಾಣಬೇಕು ಅಂದ್ರೆ ಟೀಕಾಕಾರರು ಇರಬೇಕು. ಇಬ್ಬರೂ ನಾಯಕರು ಆರೋಗ್ಯಕರವಾಗಿ ಚರ್ಚೆ ಮಾಡಬೇಕು. ಟೀಕೆಗಳು ಅಶ್ಲೀಲವಾಗಿರಬಾರದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಅಂಬಿ ಸ್ಮಾರಕಕ್ಕೆ ಕುಮಾರಸ್ವಾಮಿ ಕೊಡುಗೆ: ಅಂಬಿ ಸ್ಮಾರಕವನ್ನು ಕುಮಾರಸ್ವಾಮಿ ಮಾಡಿದ್ದಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಸಿ ತಮ್ಮಣ್ಣ, ಸ್ಮಾರಕ ಆಗಲು ಕಾರಣವೇ ಕುಮಾರಸ್ವಾಮಿ. ಹೆಚ್‌ಡಿಕೆ ಇಲ್ಲ ಅಂದಿದ್ರೆ ಅಂಬರೀಶ್ ಸ್ಮಾರಕ ಆಗುತ್ತಿರಲಿಲ್ಲ. ವಿಷ್ಣುವರ್ಧನ್ ಸ್ಮಾರಕಕ್ಕೆ ಯಾವ ಸರ್ಕಾರದಿಂದಲೂ ಜಾಗ ಕೊಡುವುದಕ್ಕೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಅಂಬಿ ಸ್ಮಾರಕಕ್ಕೆ ಜಾಗ ಸಿಗುತ್ತಿರಲಿಲ್ಲ. ನಾನು ಸಚಿವನಾಗಿದ್ದಾಗ ಕೆಎಸ್‌ಆರ್‌ಟಿಸಿ ಜಾಗ ಕೊಡಲು ನಿರ್ಧಾರ ಮಾಡಿದ್ದೆ. ಆದ್ರೆ ಆ ಜಾಗ ಬೇಡ ಅಂದರು. ಆ ನಂತರ ಕುಮಾರಸ್ವಾಮಿ ಅವರು ಜಾಗ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.