ಮಂಡ್ಯ: ಕೋವಿಡ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ನಡೆಯಲಿರುವ ವೈರಮುಡಿ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂತರ್ ರಾಜ್ಯ ಹಾಗೂ ಜಿಲ್ಲೆಯ ಇತರೆ ತಾಲೂಕುಗಳಿಂದ ಉತ್ಸವಕ್ಕೆ ಬರುವ ಭಕ್ತಾಧಿಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಆಚರಣೆಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಮಾರ್ಚ್ 19 ರಿಂದ 31 ರವರೆಗೆ ಮೇಲುಕೋಟೆ ವೈರಮುಡಿ ಉತ್ಸವ ಜರುಗಲಿದ್ದು, ಮಾ 24ರಂದು ಶ್ರೀ ಚೆಲುವನಾರಾಯಣ ಸ್ವಾಮಿಯವರಿಗೆ ವೈರಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಮಾ. 12ರ ಸರ್ಕಾರದ ಆದೇಶದಂತೆ ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಗಳನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.
ಭಕ್ತಾಧಿಗಳ ದರ್ಶನಕ್ಕೆ ದೇವಸ್ಥಾನದ 2 ಪ್ರವೇಶ ದ್ವಾರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರವೇಶದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು ಹಾಗೂ ನೆಗೆಟಿವ್ ವರದಿ ಬಂದವರಿಗೆ ಸೀಲ್ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ನಿಯೋಜಿಸಿರುವ ಅರ್ಚಕರು ಹಾಗೂ ಸರ್ಕಾರಿ ಸಿಬ್ಬಂದಿ ಹೊರತುಪಡಿಸಿ, ಹೆಚ್ಚುವರಿ ಅರ್ಚಕರು ಮತ್ತು ಸಿಬ್ಬಂದಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದ ಅವರು, ಬ್ರಹ್ಮೋತ್ಸವವು ಬೆಳಗ್ಗಿನ ಜಾವ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ರಾತ್ರಿ 12 ಗಂಟೆಯೊಳಗೆ ಮುಗಿಯುವಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಓದಿ:ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೊರೊನಾ 2ನೇ ಅಲೆ.. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರೆಷ್ಟು?
ಸರಳ ಆಚರಣೆಗೆ ಸಾರ್ವಜನಿಕರು ಸಹಕರಿಸಿ, ಸ್ಥಳದಲ್ಲಿ ಮಾಸ್ಕ್ ಧರಿಸಿ, ನಿಯೋಜಿಸಿರುವ ಸ್ಯಾನಿಟೈಸರ್ ಬಳಸಿ ಹಾಗೂ 3.25 ಚ.ಮೀ ದೈಹಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬೇಕು ಎಂದು ಆದೇಶಿಸಿದರು.