ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣದಲ್ಲಿ ಅ. 9 ರಿಂದ 3 ದಿನಗಳ ದಸರಾ ಉತ್ಸವ: ಸ್ಥಳಕ್ಕೆ ಡಿಸಿ ಎಸ್. ಅಶ್ವಥಿ ಭೇಟಿ

ಶ್ರೀರಂಗಪಟ್ಟಣದಲ್ಲಿ ಅ. 9 ರಿಂದ 3 ದಿನಗಳ ಕಾಲ ದಸರಾ ಉತ್ಸವ ನಡೆಯಲಿದೆ. ಶ್ರೀರಂಗನಾಥಸ್ವಾಮಿ ಮೈದಾನ, ಸೆಂದಿಲ್‌ಕೋಟೆ, ತಾಲೂಕು ಕ್ರೀಡಾಂಗಣ ಹಾಗೂ ಕಿರಂಗೂರು ವೃತ್ತ ಬಳಿಯ ದಸರಾ ಬನ್ನಿಮಂಟಪ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

dc s ashwathi visits shriirangapattana
ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಡಿಸಿ

By

Published : Sep 23, 2021, 1:37 PM IST

ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅ. 9 ರಿಂದ 3 ದಿನಗಳ ಕಾಲ ದಸರಾ ಉತ್ಸವವನ್ನು ಸರಳವಾಗಿ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ಅಶ್ವಥಿ ತಿಳಿಸಿದರು.

ದಸರಾ ಆಚರಣೆ ನಡೆಯುವ ಶ್ರೀರಂಗನಾಥಸ್ವಾಮಿ ಮೈದಾನ, ಸೆಂದಿಲ್‌ಕೋಟೆ, ತಾಲೂಕು ಕ್ರೀಡಾಂಗಣ ಹಾಗೂ ಕಿರಂಗೂರು ವೃತ್ತ ಬಳಿಯ ದಸರಾ ಬನ್ನಿಮಂಟಪ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಡಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದರು.

ಪಾರಂಪರಿಕ ದಸರಾ ಆಚರಣೆ:

ಅ. 9ರಂದು ಕಿರಂಗೂರು ಬನ್ನಿಮಂಟಪದಿಂದ ಪಾರಂಪರಿಕ ದಸರಾ ಆಚರಣೆ ಜತೆಗೆ ದಸರಾ ಉತ್ಸವ ಹಲವು ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಮೈದಾನ ತಲುಪಲಿದೆ.

ಶ್ರೀರಂಗಪಟ್ಟಣ ದಸರಾಗೆ ಸರ್ಕಾರ ಇನ್ನು ಸಹ ಅನುದಾನದ ಮೊತ್ತ ಅಂತಿಮಗೊಳಿಸಿ ಹಣ ಬಿಡುಗಡೆ ಮಾಡಿಲ್ಲ. ಇನ್ನರೆಡು ದಿನಗಳಲ್ಲಿ ಸರ್ಕಾರದಿಂದ ಶೀರಂಗಪಟ್ಟಣ ಪಾರಂಪರಿಕ ದಸರಾಗೆ ಎಷ್ಟು ಅನುದಾನ ಬರುತ್ತದೆ ಎಂಬುದನ್ನು ತಿಳಿದು ಕಾರ್ಯಕ್ರಮಗಳ ರೂಪುರೇಷೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.

ಇದಕ್ಕೂ ಮೊದಲು ಪಟ್ಟಣದ ಮಿನಿ ವಿಧಾನಸೌಧ ಕಚೇರಿಯಲ್ಲಿ ಪಾರಂಪರಿಕ ದಸರಾ ಪೂರ್ವ ಸಿದ್ಧತೆಗಾಗಿ ಉಪವಿಭಾಗಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ನೇತೃತ್ವದಲ್ಲಿ ಎಲ್ಲ ಇಲಾಖೆಯ ತಾಲೂಕು ಅಧಿಕಾರಿಗಳ ಸಭೆ ನಡೆಸಿದ್ದು, ಹಮ್ಮಿಕೊಳ್ಳಬೇಕಾಗಿರುವ ಕಾರ್ಯಕ್ರಮಗಳ ಪಟ್ಟಿ ಕುರಿತು ಚರ್ಚಿಸಲಾಯಿತು.

ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಡಿಸಿ

ಈ ಬಾರಿ ಪುರಾಣ ಪ್ರಸಿದ್ಧ ಕರೀಘಟ್ಟದ ಬೆಟ್ಟದಲ್ಲಿ ಬೃಹತ್ ಸ್ವಾಗತ ಕೋರುವ ವಿದ್ಯುತ್ ದೀಪಾಲಂಕಾರ, ಕಿರಂಗೂರು ಬನ್ನಿಮಂಟಪ ಹಾಗೂ ಶ್ರೀರಂಗಪಟ್ಟಣವನ್ನು ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಿ ದಸರಾ ಮೆರವಣಿಗೆ ಸಾಗುವ ಮಾರ್ಗ ಶುಚಿಗೊಳಿಸಿ ಅಣಿಗೊಳಿಸಲಾಗುವುದು.

ಬಳಿಕ ಅ.10ರಂದು ನಡೆಯುವ ಆಚರಣೆಯಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ಇರಲಿದ್ದು, ಜಾನಪದ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದಸರಾ ಸಮಿತಿಗೆ ಅರ್ಜಿ ಸಲ್ಲಿಸಲು ತಿಳಿಸಲಾಯಿತು. ಇನ್ನು ದೇಸಿ ಕ್ರೀಡೆಗಳಾದ ಕುಸ್ತಿಕಾಳಗ ಮತ್ತು ಕಬಡ್ಡಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದ್ದು, ಯಾರೇ ಕೀಡಾಸಕ್ತರು ಭಾಗಿಯಾಗಬಹುದು ಎಂದರು. ಇನ್ನು ಕರೀಘಟ್ಟ ಬೆಟ್ಟ ಹತ್ತುವ ಸ್ಪರ್ಧಿಗಳಿಗೆ ಚಾರಣ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಆರ್​​.ಶಂಕರ್ ಮನೆ ಪೂಜೆಗೆ ಬಂದಿದ್ದ ಅರ್ಚಕರ ಮೇಲೆ ಹಲ್ಲೆ: ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ

ಉಳಿದಂತೆ ದಸರಾ ವಸ್ತುಪ್ರದರ್ಶನದಲ್ಲಿ ತಾಲೂಕಿನ ಕೊಡಿಯಾಲ ಸೀರೆಗಳು ಸೇರಿದಂತೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನದ ಜತೆಗೆ ಪಶುಸಂಗೋಪನೆ ಇಲಾಖೆಯಿಂದ ಹಳ್ಳಿಕಾರು ಎತ್ತುಗಳು, ಬಂಡೂರು ಕುರಿಗಳ ಪ್ರದರ್ಶನ ಸೇರಿದಂತೆ ಕೃಷಿ, ರೇಷ್ಮೆ, ತೋಟಗಾರಿಕೆ ಇತರ ಇಲಾಖೆಗಳ ರೈತರಿಗೆ ಅನುಕೂಲವಾಗುವ ಮಾಹಿತಿ ವಸ್ತುಪ್ರದರ್ಶನ ಕೂಡ ಇರುತ್ತದೆ ಎಂದು ಹೇಳಿದರು.

ABOUT THE AUTHOR

...view details