ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿನಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಜನಮನ ದರ್ಶನ ಇದು ಭರವಸೆಯ ಯಾನ ಹೆಸರಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರ ಶುರು ಮಾಡಿದ ರೈತ ಸಂಘ ಇಂದಿನಿಂದ ಮಾ.15 ರವರೆಗೆ ಒಟ್ಟು 19 ದಿನಗಳ ಕಾಲ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ಆರಂಭವಾಗಿದೆ. ಈ ಮೂಲಕ ರೈತ ಸಂಘವನ್ನ ಅಧಿಕಾರಕ್ಕೆ ತರಲು ಸಜ್ಜಾಗಿದ್ದಾರೆ. ಯುವ ರೈತ ನಾಯಕ ಹಾಗೂ ದಿ.ಕೆ.ಎಸ್. ಪುಟ್ಟಣ್ಣಯ್ಯ ಪುತ್ರರಾಗಿರುವ ದರ್ಶನ್ ಪಟ್ಟಣ್ಣಯ್ಯ ಮಂಡ್ಯ ತಾಲ್ಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಗ್ರಾಮದ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಪೂಜೆ ಸಲ್ಲಿಸಿದ ದರ್ಶನ್ ಪಟ್ಟಣ್ಣಯ್ಯಗೆ ಗ್ರಾಮಸ್ಥರು ಆರತಿ ಬೆಳಗಿ ಬೆಂಬಲಿಸಿದರು. ಬಳಿಕ ಕ್ರೇನ್ ಮೂಲಕ ಬೃಹತ್ ಬೆಲ್ಲದ ಹಾರ ಹಾಕಿ ಅಭಿನಂದಿಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿ ತಾಯಿ ಸುನೀತಾ ಪುಟ್ಟಣ್ಣಯ್ಯ ಮಗನ ಜೊತೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು.
ಈ ಬಗ್ಗೆ ದರ್ಶನ್ ಪುಟ್ಟಣ್ಣಯ್ಯ ಮಾಧ್ಯಮದೊಂದಿಗೆ ಮಾತಾನಡಿ, ಪಾದಯಾತ್ರೆ ಮೂಲಕ ಕ್ಷೇತ್ರದ ಪ್ರವಾಸ ಮಾಡುತ್ತಿದ್ದೇವೆ. ಹೆಚ್.ಮಲ್ಲಿಗೆರೆಯಿಂದ ಪಾದಯಾತ್ರೆ ಪ್ರಾರಂಭಿಸಿದ್ದೇವೆ. ಪಾದಯಾತ್ರೆಯ ಮೂಲ ಉದ್ದೇಶ, ನಮ್ಮ ವಿಚಾರಗಳ ಬಗ್ಗೆ ಜನರಿಗೆ ತಿಳಿಸುವುದು ಹಾಗೂ ನಾನು ಸದಾ ನಿಮ್ಮ ಬೆಂಬಲಕ್ಕೆ ಇರುವುದಾಗಿ ಹೇಳಲು ಈ ಯಾತ್ರೆ ಕೈಗೊಂಡಿದ್ದೇನೆ. ಹೆಚ್ ಮಲ್ಲಿಗೆರೆಯಿಂದ ಪ್ರಾರಂಭವಾದ ಯಾತ್ರೆ ಪಾಂಡವಪುರದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲದೇ ಪಾಂಡವಪುರದಲ್ಲಿ ಬೃಹತ್ ಸಮಾವೇಶವನ್ನು ಮಾಡಲಿದ್ದೇವೆ. ಈ ಸಮಾವೇಶದಲ್ಲಿ ಚಿತ್ರ ನಟರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಆಗಮಿಸಲಿದ್ದಾರೆ ಎಂದು ದರ್ಶನ್ ಪಟ್ಟಣ್ಣಯ್ಯ ಹೇಳಿದರು.