ಮಂಡ್ಯ: ರಾಜ್ಯ ಸರ್ಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ದಲಿತ ಮುಖಂಡ ಮರಳಿಗ ಶಿವರಾಜ್ ಎಂಬವರನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು ನೀಡಿದ ದೂರಿನನ್ವಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153 ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಮರಳಿಗ ಶಿವರಾಜ್ ಕಳೆದ ಮೇ. 30 ರಂದು, "ಜಿ.ಪರಮೇಶ್ವರ್ ಒಬ್ಬ ಅಯೋಗ್ಯ, ಸ್ವಂತ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಈತ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲಿಲ್ಲ. ಆರ್ಎಸ್ಎಸ್ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ ಇದ್ದವರು ಉತ್ತರಿಸಲಿ" ಎಂದು ಜಾಲತಾಣದಲ್ಲಿ ಅವಹೇಳನವಾಗಿ ಪೋಸ್ಟ್ ಮಾಡುವ ಮೂಲಕ ನಿಂದಿಸಿದ್ದಾರೆ ಎಂದು ದಾಖಲೆಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಡಿ ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸರು ಶಿವರಾಜ್ ಬಂಧಿಸಿದ್ದಾರೆ.
ಶಾಸಕ ಬಿ.ಪಿ.ಹರೀಶ್ ವಿರುದ್ಧ ಪ್ರಕರಣ ದಾಖಲು:ಕೆಲವು ದಿನಗಳ ಹಿಂದೆ ಹರಿಹರ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದ್ರೂ ಸಹ ದಲಿತರು ನಮಗೆ ಮತ ಹಾಕಿಲ್ಲ ಎಂದು ಆಕ್ಷೇಪಾರ್ಹವಾಗಿ ನಿಂದಿಸಿದ್ದರಿಂದ ನೂತನ ಶಾಸಕನ ವಿರುದ್ದ ದೂರು ದಾಖಲಾಗಿದೆ. ಬಿಜೆಪಿ ನೂತನ ಶಾಸಕ ಬಿ.ಪಿ.ಹರೀಶ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಐಪಿಸಿ 504 ಹಾಗೂ ಕಲಂ 3(1)(o), 3(1)(r) SC ST PA act 1989 ನಡಿ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಕ್ಷೇಪಾರ್ಹವಾಗಿ ಮಾತನಾಡಿರುವ ಶಾಸಕರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಭೋವಿ ಸಮಾಜದ ವಿರುದ್ಧ ನೀಡಿದ ಹೇಳಿಕೆಗೆ ಸಮುದಾಯದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಚುನಾವಣೆ ಫಲಿತಾಂಶ ನಂತರ ಶಾಸಕ ಬಿ.ಪಿ.ಹರೀಶ್, ರಾಜ್ಯದಲ್ಲಿ ಒಳ ಮೀಸಲಾತಿ ತಂದು ಮಾದಿಗರಿಗೆ ಹೆಚ್ಚು ಶೇಕಡಾವಾರು ನೀಡಲಾಗಿದೆ. ಆದರೆ ಬಿಜೆಪಿಗೆ ಈ ಸಮುದಾಯ ಮತ ಹಾಕಿಲ್ಲ ಎಂದಿದ್ದರು. ಇದೇ ಸಂದರ್ಭದಲ್ಲಿ ಆಕ್ಷೇಪಾರ್ಹ ಪದ ಬಳಸಿದ್ದರು. ಈ ಹೇಳಿಕೆಗೆ ಮಾದಿಗ ಸಮುದಾಯ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಅವರು, ಒಳ ಮೀಸಲಾತಿ ಪಡೆದ ನಂತರ ಮಾದಿಗ ಸಮಾಜ ನಮ್ಮ ಜತೆಗಿರಬೇಕಿತ್ತು. ಆದರೆ ಬಂಜಾರ ಭೋವಿ ಸಮಾಜದವರು ನಮಗೆ ಮತ ಹಾಕಿಲ್ಲ ಎಂದು ಬೇಜಾರು ಇಲ್ಲ. ಅವರಿಗೆ ಸಹಾಯ ಮಾಡಿದ್ರೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಈ ಪರಿಸ್ಥಿತಿಗೆ ಬರಲು ಅವರ ಮತಗಳು ಕಡಿಮೆ ಬಂದಿದ್ದೇ ಕಾರಣ ಎಂದು ಹೇಳಿದ್ದರು.
"ಸ್ವಾಭಾವಿಕವಾಗಿ ನಾವು, ನಿಮ್ಮ ಅಪ್ಪನಿಗೆ ಹುಟ್ಟಿದ್ರೆ ಹೊಡಿಯಪ್ಪ ಎಂದು ಹೇಳುತ್ತೇವೆ. ಅವನು ಹೊಡೆದ್ರೆ ಮಾತ್ರ ಅಪ್ಪನಿಗೆ ಹುಟ್ಟಿದವನಲ್ಲ ಇದು ಲೋಕಾರೂಢಿ ಮಾತು. ಅಪ್ಪನಿಗೆ ಹುಟ್ಟಿದವರು ಮಾತ್ರ ಮತ ಹಾಕಿದ್ದು ಎಂದು ಅಂದಿದ್ದು ಸತ್ಯ'' ಎಂದು ಅವರೇ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಹರೀಶ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ:ದಲಿತ ಸಮುದಾಯ ನಿಂದಿಸಿದ್ದ ವಿಡಿಯೋ ವೈರಲ್.. ಹರಿಹರ ಶಾಸಕ ಬಿ ಪಿ ಹರೀಶ್ ವಿರುದ್ಧ ಕೇಸ್