ಮಂಡ್ಯ :ರಾಜ್ಯ ಬಿಜೆಪಿಯಲ್ಲಿ ರಾಜಕಾರಣದ ವಿಭಿನ್ನ ಚಟುವಟಿಕೆಗಳು ನಡೆಯುತ್ತಿವೆ ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು, ಒಕ್ಕಲಿಗರ ಶಕ್ತಿ ಕೇಂದ್ರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಖಾರ ಹುಣ್ಣಿಮೆಯ ರಾತ್ರಿ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಹುಣ್ಣಿಮೆಯ ವಿಶೇಷ ಪೂಜಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿ ಟಿ ರವಿ ಹಾಗೂ ಹಾಸನದ ಶಾಸಕ ಪ್ರೀತಂಗೌಡ ಭಾಗವಹಿಸಿದ್ದರು.
ಕ್ಷೇತ್ರದ ಶ್ರೀಕಾಲಭೈರವೇಶ್ವರ ಸ್ವಾಮಿ, ಶ್ರೀಮಾಳಮ್ಮ ದೇವಿ ಹಾಗೂ ಆದಿಶಕ್ತಿ ಸಭಾಂಬಿಕಾ ದೇವಿ ದೇವರುಗಳ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಿ.ಟಿ. ರವಿ ಪಾಲ್ಗೊಂಡರು. ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ, ಶ್ರೀಗಳಿಂದ ಆಶೀರ್ವಾದ ಪಡೆದರು.
ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಹಿನ್ನೆಲೆ ಆದಿಚುಂಚನಗಿರಿ ಮಠಕ್ಕೆ ಸಿ ಟಿ ರವಿ ಭೇಟಿ ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ. ನಾಗಮಂಗಲ ತಾಲೂಕಿನ ಹಾಗೂ ಜಿಲ್ಲಾ ಮಟ್ಟದ ಯಾವೊಬ್ಬ ಬಿಜೆಪಿ ಕಾರ್ಯಕರ್ತರಿಗೂ ಸಿ ಟಿ ರವಿ ಮಠದ ಭೇಟಿಯ ಬಗ್ಗೆ ಸುಳಿವಿರಲಿಲ್ಲ .
ಇದನ್ನೂ ಓದಿ:ಮನೆಗೆ ಬರುವ ಸೊಸೆಗೆ ಸಿಗುವ ರೀತಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಬೀಗದ ಕೈ ಸಿಕ್ಕಿದೆ: ಇಬ್ರಾಹಿಂ