ಮಂಡ್ಯ:ಸಕ್ಕರೆ ನಾಡು ಮಂಡ್ಯದಲ್ಲಿ ನೆತ್ತರು ಹರಿದಿದೆ.ಅಟ್ಟಾಡಿಸಿಕೊಂಡು ಬಂದು ಯುವಕನನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಗಾಂಧಿನಗರದ ನಾಲ್ಕನೇ ಕ್ರಾಸ್ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬಡಾವಣೆಯ ಐದನೇ ಕ್ರಾಸ್ನ ಕುಮಾರ್ ಅವರ ಪುತ್ರ ಅಕ್ಷಯ್ ಆಲಿಯಾಸ್ ಗಂಟಲು (22) ಎಂಬ ಯುವಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹೊಸಳ್ಳಿ ರಸ್ತೆಯ ಎಸ್ ಪಿ ಟೀ ಸ್ಟಾಲ್ ಬಳಿ ನಿಂತಿದ್ದ ಅಕ್ಷಯ್ ಮೇಲೆ ಗುಂಪೊಂದು ದಾಳಿ ಮಾಡಿದ್ದು, ತಕ್ಷಣ ಎಚ್ಚೆತ್ತ ಯುವಕ ಪಾರಾಗಲು ಗಾಂಧಿ ನಗರ ನಾಲ್ಕನೇ ಕ್ರಾಸ್ನತ್ತ ಓಡಿ ಹೋಗಿದ್ದಾನೆ. ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಯುವಕನನ್ನು ಬೆನ್ನತ್ತಿದ್ದರು.
ದೊಡ್ಡಮ್ಮಣಿ ಚಂದ್ರ ಚಾರ್ ಅವರ ಮನೆಯ ಗೇಟ್ ತೆರೆದಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ಯುವಕ ಓಡಿದ್ದಾನೆ. ಆದರೆ, ಮೆಟ್ಟಿಲಿಗೆ ಹಾಕಲಾಗಿದ್ದ ಗೇಟ್ ಮುಚ್ಚಿದ್ದರಿಂದ ಅಲ್ಲಿ ಸಿಕ್ಕಿಹಾಕಿಕೊಂಡ ಯುವಕನ ಮೇಲೆ ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದರಿಂದ ಅಕ್ಷಯ್ ಸ್ಥಳದಲ್ಲಿಯೇ ಹಂತಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ.
ಸ್ಥಳದಲ್ಲಿ ಬಿದ್ದಿದ್ದ ಮೃತ ದೇಹದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಗುರುತು ಹಾಗೂ ರಕ್ತದ ಕಲೆಗಳು ಹತ್ಯೆಯ ಭೀಕರತೆ ತಿಳಿಸುತ್ತದೆ.
ಸೋಮವಾರವೂ ನಡೆದಿತ್ತು ದಾಳಿ ಪ್ರಕರಣ: ಇದೇ ಗಾಂಧಿ ನಗರದ ಏಳನೇ ಕ್ರಾಸ್ನಲ್ಲಿ ಸೋಮವಾರ ಯುವಕರ ಗುಂಪೊಂದು ಬೈಕಿನಲ್ಲಿ ಬಂದು ಓರ್ವ ಯುವಕನ ಮೇಲೆ ಇದೇ ರೀತಿ ದಾಳಿ ಮಾಡಿತ್ತು. ಆದರೆ, ಅದೃಷ್ಟವಶಾತ್ ಆ ಯುವಕ ಅದೃಷ್ಟವಶಾತ್ ಪಾರಾಗಿದ್ದ.
ಆರೋಪಿಗಳ ಪತ್ತೆಗಾಗಿ ಪೊಲೀಸರಿಂದ ಶೋಧ ಕಾರ್ಯ: ಯುವಕನ ತಂದೆ ಕುಮಾರ್ ಕಿರುಗಾವಲು ರಸ್ತೆಯಲ್ಲಿರುವ ಡಾಬಾವನ್ನು ನಡೆಸುತ್ತಿದ್ದಾನೆ. ಅಲ್ಲಿ ಅಕ್ಷಯ್ ಜೊತೆ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಅದರ ಹಿನ್ನೆಲೆಯಲ್ಲಿ ಕೊಲೆ ನಡೆದಿದೆಯಾ? ಅದೇ ರೀತಿ ಗಣಪತಿ ಪ್ರತಿಷ್ಠಾಪನೆಗೆ ಈತನ ಗುಂಪು ಮುಂದಾಗಿತ್ತು. ಹಣಕಾಸು ವಿಚಾರವಾಗಿ ಹಲವರೊಂದಿಗೆ ವೈಷಮ್ಯ ಇದ್ದು, ಆ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆಯಾ ಎಂಬ ಬಗ್ಗೆ ಅನುಮಾನಗಳಿವೆ. ಈ ಎಲ್ಲಾ ಆಯಾಮಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಭೀಕರ ಹತ್ಯೆ ನಡೆದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬೀದರ್: ಕುಡಿಯಲು ಹಣ ನೀಡುವಂತೆ ಪೀಡಿಸಿ ಹೆತ್ತ ತಾಯಿಯನ್ನೇ ಕೊಂದ ಪುತ್ರ