ಮಂಡ್ಯ : ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯ ಸೇಡಿನ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಮಂಡ್ಯದ ಸಾತನೂರು ಎಂಬಲ್ಲಿ ನಡೆದಿದೆ. ಇಲ್ಲಿ ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನು ಅಪಹರಿಸಿದ ದುಷ್ಕರ್ಮಿಗಳು ಕೊಂದು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ. 13 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದೆ. ಬೇವನಹಳ್ಳಿ ಗ್ರಾಮದ ಭೀಮೇಶ್, ಆನೆಕೆರೆ ಬೀದಿಯ ಸುನೀಲ್, ವಿನಯ್ ಹಾಗೂ ನಿರಂಜನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ಸಹೋದರ ರಮೇಶ್ ಹಾಗೂ ಭೀಮೇಶ್ ನಡುವೆ ಜಗಳ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೇ 23ರಂದು ಪೊಲೀಸರ ಸೋಗಿನಲ್ಲಿ ರಮೇಶ್‌ನನ್ನು ಹುಡುಕಿಕೊಂಡು ಈ ಆರೋಪಿಗಳು ಅವರ ಮನೆಗೆ ಬಂದಿದ್ದರು. ಈ ವೇಳೆ ರಮೇಶ್ ಮನೆಯಲ್ಲಿ ಇಲ್ಲದ ಕಾರಣ ಆತನ ಅಣ್ಣ ವೆಂಕಟೇಶ್‌ನನ್ನು ಅಪಹರಿಸಿಕೊಂಡು ಹೋಗಿದ್ದರು. ಬಳಿಕ ಆರೋಪಿಗಳು ವೆಂಕಟೇಶ್ಗೆ ಹಲ್ಲೆ ಮಾಡಿದ್ದು, ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ವೆಂಕಟೇಶ್ನ ಮೃತದೇಹವನ್ನು ಆರೋಪಿಗಳು ಹುಲಿಕೆರೆ ಕೊಪ್ಪಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ. ಆ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಿವಿಧೆಡೆ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಟೋಲ್ ಹಣದ ವಿಚಾರಕ್ಕೆ ಗಲಾಟೆ.. ಯುವಕನನ್ನು ಹಾಕಿ ಸ್ಟಿಕ್ನಿಂದ ಕೊಲೆ ಮಾಡಿದ ದುಷ್ಕರ್ಮಿಗಳು