ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡ ಕೊರೊನಾ ವಾರಿಯರ್ : ಸಂಕ್ಟಷ್ಟಕ್ಕೆ ಸಿಲುಕಿದ ಕುಟುಂಬ
ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿಯೋರ್ವ ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಅಪಘಾತದಿಂದ ಹಾಸಿಗೆ ಹಿಡಿದ ಕೊರೊನಾ ವಾರಿಯರ್
ಮಂಡ್ಯ:ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿಯೋರ್ವ ಅಪಘಾತದಲ್ಲಿ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದಾರೆ. ಆದರೆ ಸಹಾಯಕ್ಕೆ ಬರಬೇಕಾದ ಗೃಹ ಇಲಾಖೆ ಹಾಗೂ ಗೃಹ ರಕ್ಷಕ ದಳ ಕಣ್ಣು ಮುಚ್ಚಿ ಕುಳಿತಿವೆ ಎಂಬ ಆರೋಪ ಕೇಳಿ ಬಂದಿದೆ.
ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದ ಕಾರ್ತಿಕ್ ಕುಮಾರ್ ಎಂಬುವವರು ಗೃಹ ರಕ್ಷಕ ದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೊರೊನಾ ಹಿನ್ನೆಲೆ ಇವರನ್ನು ಮದ್ದೂರು ಪೊಲೀಸ್ ಠಾಣೆಗೆ ನಿಯೋಜನೆ ಮಾಡಲಾಗಿತ್ತು. ಏ. 19 ರಂದು ಕರ್ತವ್ಯ ಮುಗಿಸಿ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ. ಈ ವೇಳೆ ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿ ಹಾಸಿಗೆ ಹಿಡಿದಿದ್ದಾರೆ. ಆದರೆ ಗೃಹರಕ್ಷಕ ದಳ ಹಾಗೂ ಗೃಹ ಇಲಾಖೆ ಅಧಿಕಾರಿಗಳು ಇವರ ನೋವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಇರುವ ಒಬ್ಬನೇ ಮಗನಿಗೆ ಈ ಗತಿ ಆಯಿತು ಎಂಬ ನೋವಿನಿಂದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ದುಡಿದು ಮನೆ ನೋಡಿಕೊಳ್ಳುತ್ತಿದ್ದ ಕಾರ್ತಿಕ್ ಇದೀಗ ಹಾಸಿಗೆ ಹಿಡಿದಿದ್ದು, ಈ ಸಂಸಾರ ಹೊತ್ತಿನ ಊಟಕ್ಕೂ ಪರದಾಡುತ್ತಿದೆ. ಹೀಗಾಗಿ ಕೆಲ ಸಂಘಟನೆಗಳು ಸಹಾಯಕ್ಕೆ ನಿಂತಿವೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಇವರ ಸಹಾಯಕ್ಕೆ ಬರಬೇಕೆಂಬುದು ಕುಟುಂಬಸ್ಥರ ಮನವಿ.