ಮಂಡ್ಯ: ಮೈಸೂರು ಭಾಗದಲ್ಲಿ ಕಂಚಿ ಸೀರೆಗೆಹೆಚ್ಚು ಬೇಡಿಕೆ ಇದೆ. ಮೈಸೂರು ಮಹಾರಾಜರು ಸ್ಥಳೀಯ ರೈತರ ಹಿತಕ್ಕಾಗಿ ಕೈಮಗ್ಗ ಆರಂಭಿಸಿದರು. ಈ ಪ್ರಾಂತ್ಯದಲ್ಲಿ ಕೊಡಿಯಾಲ ಸೀರೆ ಎಂದರೆ ಬಹಳ ಪ್ರಸಿದ್ಧಿ. ಮೈಸೂರು ಅರಸರ ಆಳ್ವಿಕೆಯಲ್ಲಿ ರೇಷ್ಮೆ ರಾಜ್ಯಕ್ಕೆ ಕಾಲಿಟ್ಟ ಗಳಿಗೆಯಲ್ಲಿ ಮಗ್ಗದ ಉದ್ಯಮವೂ ನೆಲೆ ಕಂಡಿತು.
ಮೈಸೂರು ಅರಸರ ಕಾಲದಲ್ಲಿ ರೇಷ್ಮೆ ಬೆಳೆ ಪರಿಚಯವಾಗಿ ಅದನ್ನು ಬೆಳೆಯಲು ತೊಡಗುತ್ತಿದ್ದಂತೆ ಮಹಾರಾಜರು ಮೊದಲು ಮಾಡಿದ ಕೆಲಸ ಜಿಲ್ಲೆಯ ಐದು ಕಡೆ ಜವಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದ್ದರು. ಮಂಡ್ಯ ಜಿಲ್ಲೆಯ ಕೊಡಿಯಾಲ, ಕಿಕ್ಕೇರಿ, ತಳಗವಾದಿ, ಬೆಳಕವಾಡಿ ಹಾಗೂ ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಜವಳಿ ಪರಿಣಿತರನ್ನು ಕರೆತಂದು ಪ್ರೋತ್ಸಾಹ ನೀಡಿದರು. ಆದರೆ ಇಂದು ಗಟ್ಟಿಯಾಗಿ ತಳ ಊರಿದ್ದು ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಉದ್ಯಮಿಗಳು.
ಸೀರೆ ಉದ್ಯಮಕ್ಕೆ ಕಂಟಕವಾದ ಕೊರೊನಾ ಕೊಡಿಯಾಲ ಗ್ರಾಮದಲ್ಲಿ ಇಂದು 600ಕ್ಕೂ ಹೆಚ್ಚು ಮಗ್ಗಗಳು ಇವೆ. ಯಾಂತ್ರಿಕ ಮಗ್ಗಗಳ ಜೊತೆ ರೇಷ್ಮೆ ನೇಯ್ಗೆಯ ಕೈ ಮಗ್ಗಗಳನ್ನು ಇಲ್ಲಿ ಕಾಣಬಹುದು. ಜವಳಿ ಉದ್ಯಮ ಇಲ್ಲಿ 1500ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ನೀಡಿದರೆ, ಪರೋಕ್ಷ ಉದ್ಯೋಗ 10 ಸಾವಿರ ದಾಟುತ್ತದೆ.
ಇಲ್ಲಿ ತಯಾರಿಸುವ ಸೀರೆಗಳನ್ನು ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಹೊರ ರಾಜ್ಯಕ್ಕೂ ಸರಬರಾಜು ಮಾಡಲಾಗುತ್ತಿದೆ. ತಿಂಗಳಿಗೆ ಕೋಟ್ಯಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ವಿದೇಶಗಳಿಗೂ ರಫ್ತು ಮಾಡಲು ಮುಂದಾಗಿದ್ದಾರೆ ಇಲ್ಲಿನ ಉದ್ಯಮಿಗಳು.
ಇತಿಹಾಸವನ್ನು ಹೊಂದಿರುವ ಕೊಡಿಯಾಲ ಸೀರೆ ಉದ್ಯಮ ಇಂದು ಸಂಕಷ್ಟಕ್ಕೆ ಒಳಗಾಗಿದೆ. ಕೊರೊನಾ ಉದ್ಯಮಿಗಳ ಕನಸಿಗೆ ತಣ್ಣೀರು ಎರಚಿದರೆ, ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿಸಿದೆ. ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ. ಮದುವೆ, ಇತರೆ ಸಮಾರಂಭಗಳು ಸರಳವಾಗಿ ನಡೆಯುತ್ತಿರುವುದರಿಂದ ಕಂಚಿ ಸೀರೆಗಳಿಗೆ ಬೇಡಿಕೆ ಇಲ್ಲದಂತಾಗಿರುವುದು ಇಲ್ಲಿನ ಉದ್ಯಮಿಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟ ಸಿಲುಕಿಸಿದೆ.
ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಆರಂಭವಾದ ಜವಳಿ ಉದ್ಯಮ ಉತ್ತುಂಗಕ್ಕೆ ಏರುವ ಸಮಯದಲ್ಲಿ, ಕೊರೊನಾ ಸಂಕಷ್ಟ ತಂದಿದೆ. ನೌಕರರಿಗೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಇನ್ನೂ ಪರಿಹಾರದ ಪ್ಯಾಕೇಜ್ ನೀಡಿಲ್ಲ. ಇನ್ನಾದರೂ ಸರ್ಕಾರ ಉದ್ಯಮದ ಪ್ರೋತ್ಸಾಹಕ್ಕೆ ಯೋಜನೆ ರೂಪಿಸಬೇಕಿದೆ.