ಮಂಡ್ಯ:ಬಿಜೆಪಿ ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಭಿನ್ನಮತ ಸ್ಪೋಟದಿಂದ ಎಚ್ಚೆತ್ತ ನಾಯಕರು ಅಸಮಾಧಾನಿತರೊಂದಿಗೆ ಸಭೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿತರ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಆಕಾಂಕ್ಷಿತರೊಂದಿಗೆ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ನೇತೃತ್ವದಲ್ಲಿ ಸಭೆ ನಡೆಯಿತು. ಕ್ಷೇತ್ರದ ಟಿಕೆಟ್ ಬಯಸಿ 16 ಮಂದಿ ಅರ್ಜಿ ಹಾಕಿದ್ದರು. ಈ ಅಭ್ಯರ್ಥಿಗಳಲ್ಲಿ ಪಿ.ರವಿಕುಮಾರ್ಗೆ ಟಿಕೆಟ್ ಘೋಷಣೆಯಾಗಿತ್ತು. ಬಳಿಕ ಆಕಾಂಕ್ಷಿತರು ಅಸಮಾಧಾನಗೊಂಡಿದ್ದರು.
ಅಂಜನಾ ಶ್ರೀಕಾಂತ್, ಯೂಥ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಿದಂಬರ್, ಹೊಸಹಳ್ಳಿ ಶಿವಲಿಂಗೇಗೌಡ, ಹಾಲಹಳ್ಳಿ ಅಶೋಕ್ರೊಂದಿಗೆ ಚರ್ಚೆ ನಡೆಸಿ ಸಮಾಧಾನಪಡಿಸಲು ಮಧು ಜಿ. ಮಾದೇಗೌಡ ಮುಂದಾಗಿದ್ದಾರೆ. ಪಕ್ಷದ ತೀರ್ಮಾನದಂತೆ ಭಿನ್ನಮತ ಇಲ್ಲದೇ ಕೆಲಸ ಮಾಡಬೇಕು. ಪಕ್ಷ ನಿಷ್ಠೆಯಿಂದ ದುಡಿಯುವ ಬಗ್ಗೆ ಸೂಚನೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಚುನಾವಣೆ ಪ್ರಕ್ರಿಯೆ ಚುರುಕುಗೊಳಿಸಿದ್ದೇವೆ. ನಮ್ಮ ನಾಯಕರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಏ.19 ರಂದು ರವಿಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ನಾಮಪತ್ರ ಸಲ್ಲಿಕೆಗೆ ಬರಬೇಕು. ಅಸಮಾಧಾನಿತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸುವ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.