ಮಂಡ್ಯ : ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ, ತನಿಖೆ ನಡೆಸಲು ಸಿಐಡಿ ಅಧಿಕಾರಿಗಳ ತಂಡ ಬುಧವಾರ ಜಂಟಿ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿ ಮಂಗಳವಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಸಿಐಡಿ, ಐಜಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕೃಷಿ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿತ್ತು. ಜಂಟಿ ನಿರ್ದೇಶಕ ವಿ ಎಸ್ ಅಶೋಕ್ ಅವರೊಂದಿಗೆ ಸಿಐಡಿ ಅಧಿಕಾರಿಗಳು ಕೆಲ ಕಾಲ ಮಾತುಕತೆ ನಡೆಸಿದರು.
ನಂತರ ಪತ್ರ ಬರೆದಿದ್ದಾರೆ ಎನ್ನಲಾದ ಎಲ್ಲಾ ಏಳು ಸಹಾಯಕ ನಿರ್ದೇಶಕರ ಜೊತೆ ಸಿಐಡಿ ಅಧಿಕಾರಿಗಳು ಪ್ರತ್ಯೇಕವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು. ರಾಜ್ಯಪಾಲರ ಕಚೇರಿಗೆ ಬಂದಿರುವ ಪತ್ರ ಮೈಸೂರು ನಗರದ ಸರಸ್ವತಿ ಪುರಂ ಅಂಚೆ ಕಚೇರಿಯಿಂದ ಕಳುಹಿಸಲಾಗಿದೆ ಎಂಬ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ಪರಿಶೀಲನೆಗೆ ತೆರಳಿದರು.
ರಾಜ್ಯಪಾಲರನ್ನು ಭೇಟಿಯಾದ ಶಾಸಕರ ನಿಯೋಗ:ರಾಜ್ಯಪಾಲರಿಗೆ ಪತ್ರ ಬರೆದಿರುವ ಕೃಷಿ ಅಧಿಕಾರಿಗಳ ವಿಚಾರದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಶಾಸಕರ ನಿಯೋಗ ಕೂಡ ಇಂದು ರಾಜಭವನಕ್ಕೆ ಭೇಟಿ ನೀಡಿತ್ತು. ಪತ್ರ ಸಂಬಂಧ ಕೆಲವೊಂದು ಮಾಹಿತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಚರ್ಚೆ ಮಾಡಿದ್ದು, ಪ್ರಕರಣದ ಹಿಂದೆ ರಾಜಕೀಯ ಕಾರಣ ಇದೆ ಎಂದು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿತು.
ಮಂಡ್ಯ ಜಿಲ್ಲೆಯ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಕೆ ಎಂ ಉದಯ್ ಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀರಾಮ ಕೃಷ್ಣ, ಕೆ ಬಿ ಚಂದ್ರಶೇಖರ್ ಒಳಗೊಂಡ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರೂ ಕೆಲವೊಂದು ಸ್ಪಷ್ಟೀಕರಣ ನೀಡಿ ಮಾಹಿತಿ ನೀಡಿದೆ. ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಅನ್ನೋದನ್ನು ಸಹ ನಿಯೋಗ ಇದೇ ವೇಳೆ ರಾಜ್ಯಪಾಲರಿಗೆ ತಿಳಿಸಿತು.
''ತಾವು ಒಕ್ಕಲಿಗರು, ಅದಕ್ಕೆ ಸಹಿಸಲು ಆಗುತ್ತಿಲ್ಲ. ಎರಡು ಬಾರಿ ಸಿಎಂ ಆದವರು ಇಂತಹ ಕೆಳಮಟ್ಟಕ್ಕೆ ಇಳಿಯಬಾರದು. ಇದು ಅವರ ಸಂಸ್ಕಾರ ಅಲ್ಲ. ಅವರ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಇದೆಲ್ಲಾ ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ. ಒಂದು ವೇಳೆ ಅವರು ಇದನ್ನೇ ಮುಂದುವರೆಸಿದರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:Chaluvarayaswamy: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಪತ್ರ: ಸತ್ಯಾಸತ್ಯತೆಗೆ ಸಿಐಡಿ ತನಿಖೆ