ಮಂಡ್ಯ:ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಜಾಲವನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬೇಧಿಸಿದ್ದು ಈಗಾಗಲೇ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದೀಗ ಲೋಕಾಯುಕ್ತ ಅಧಿಕಾರಿಗಳು ಕೂಡ ಮಧ್ಯಪ್ರವೇಶಿಸಿ ಸಮಗ್ರ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಮತ್ತೊಂದೆಡೆ, ಆರೋಗ್ಯ ಇಲಾಖೆಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ.
ಮಂಡ್ಯದ ಆಲೆಮನೆಯಲ್ಲಿ ದಂಧೆ: ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿಯ ಆಲೆಮನೆಯೊಂದರಲ್ಲಿ ಈ ಕರಾಳ ದಂಧೆ ನಡೆಯುತ್ತಿತ್ತು. ಬೆಂಗಳೂರಿನಿಂದ ಗರ್ಭಿಣಿಯರನ್ನು ಕರೆದುಕೊಂಡು ಬಂದು ಸ್ಕ್ಯಾನಿಂಗ್ ಕೂಡ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ ಪ್ರಕರಣ ಹೊರಬಂದ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಕಲೆ ಹಾಕಿ ವರದಿ ನೀಡಲು ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವ ತಂಡ ಮುಂದಾಗಿದೆ.
ಈ ಪ್ರಕರಣವನ್ನು ಸಿಎಂ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಮೈಸೂರು, ಮಂಡ್ಯದಲ್ಲಿ ಮಾಹಿತಿ ಪಡೆಯಲು ಮುಂದಾಗಿದ್ದರು. ಸಕ್ಷಮ ಪ್ರಾಧಿಕಾರದ ನಿರ್ದೇಶಕ ಶ್ರೀನಿವಾಸ್ ನೇತೃತ್ವದ ತಂಡ ಬುಧವಾರ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಡಿಹೆಚ್ಒ ಹಾಗೂ ಟಿಹೆಚ್ಒ ಜೊತೆ ಸಭೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದರು.
ಇದನ್ನೂ ಓದಿ: ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ.. ಆಲೆಮನೆಯನ್ನೇ ಸ್ಕ್ಯಾನಿಂಗ್ ಸೆಂಟರ್ ಆಗಿ ಪರಿವರ್ತಿಸಿದ್ದ ನಾಲ್ವರ ಸೆರೆ
ಅಧಿಕಾರಿಗಳ ಸಭೆಯ ನಂತರ ಸಕ್ಷಮ ಪ್ರಾಧಿಕಾರದ ನಿರ್ದೇಶಕ ಡಾ.ಶ್ರೀನಿವಾಸ್ ಮಾತನಾಡಿ, "ಈಗ ಸಿಕ್ಕಿರುವ ಆರೋಪಿಗಳಲ್ಲಿ ಯಾರೂ ವೈದ್ಯರಿಲ್ಲ. ಅಲ್ಲದೇ ಅವರು ಯಾವುದೇ ಟ್ರೈನಿಂಗ್ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಆರೋಪಿಗಳು ಇಲ್ಲಿ ಭ್ರೂಣ ಹತ್ಯೆ ಮಾಡುತ್ತಿರಲಿಲ್ಲ. ಹೊರ ಜಿಲ್ಲೆಗಳಿಂದ ಇಲ್ಲಿಗೆ ಮಹಿಳೆಯರನ್ನು ಕರೆತರುತ್ತಿದ್ದರು ಎಂಬ ಅನುಮಾನದ ಮೇಲೆ ಪೊಲೀಸ್ ಟ್ರ್ಯಾಕ್ ಆಗಿದೆ. ಇದೊಂದು ರಾಕೆಟ್ ಆಗಿದ್ದು, ಇದರ ಆಳ-ಅಗಲ, ಮಹಿಳೆಯರನ್ನು ಎಲ್ಲಿಂದ ಕರೆತರುತ್ತಿದ್ದರು ಎಂಬ ಕುರಿತು ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಅಲ್ಲದೇ ಯಾವ ಯಂತ್ರವನ್ನು ಬಳಸುತ್ತಿದ್ದರು, ಅದನ್ನು ಎಲ್ಲಿಂದ ತಂದಿದ್ದರು ಎಂಬೆಲ್ಲ ಅಂಶಗಳ ಕುರಿತು ಮಾಹಿತಿ ಸಿಗಬೇಕಿದೆ" ಎಂದರು.
"ಈ ರೀತಿಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅದಕ್ಕಾಗಿ ಒಂದು ತಂಡ ರಚನೆ ಮಾಡಲಾಗುತ್ತದೆ. ಎರಡು ದಿನಗಳಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದ್ದು, ಈಗ ಸಂಗ್ರಹಿಸಿರುವ ಮಾಹಿತಿ ನೀಡಲಾಗುತ್ತದೆ. ಪೊಲೀಸರು ಈಗ ಹಿಡಿದಿರುವ ಕಾರಿನ ಬಗ್ಗೆ ಐದು ತಿಂಗಳ ಹಿಂದೆಯೇ ಮಾಹಿತಿ ನೀಡಿದ್ದೆವು. ನಾವು ನೀಡಿದ್ದ ವಾಹನದ ಮಾಹಿತಿ ಆಧಾರದ ಮೇಲೆ ಈಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇದು ನಾನ್‌ಬೇಲೆಬಲ್ ಕೇಸ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದರು.
ಇದನ್ನೂ ಓದಿ: ವೈದ್ಯಕೀಯ ಪವಾಡ: ಗರ್ಭದಲ್ಲೇ ಅವಳಿ ಮಕ್ಕಳ ಮೊದಲ ಭ್ರೂಣ ಸಾವು, 125 ದಿನದ ಬಳಿಕ ಜನಿಸಿದ ಎರಡನೇ ಶಿಶು