ಮಂಡ್ಯ:ಪಡಿತರ ವಿತರಕರು ಕಾರ್ಡುದಾರರ ಬಳಿ ಹೆಚ್ಚುವರಿ ಹಣ ಪಡೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಪಡಿತರ ಕಾರ್ಡುದಾರರಿಂದ ಹೆಚ್ಚುವರಿ ಹಣ ಪಡೆದರೆ ಕಠಿಣ ಕ್ರಮ ಜರುಗಿಸಲಾಗುವುದು: ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಡುದಾರರ ಬಳಿ ಹೆಚ್ಚುವರಿ ಹಣ ಕೇಳಿ ಪಡೆದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರದೊಂದಿಗೆ ಹೋರಾಟ ಮಾಡಿ ಸಂಬಳ ಪಡೆಯಬೇಕೇ ಹೊರತು ಗ್ರಾಹಕರ ಬಳಿ ಹೆಚ್ಚುವರಿ ಹಣ ಪಡೆಯಬಾರದು. ಒಂದು ವೇಳೆ ಅಂಥ ಪ್ರಕರಣಗಳು ಕಂಡುಬಂದರೆ ಅವರ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಪಡಿತರ ವಿತರಕರ ಮಾಲೀಕರಿಗೆ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಜ.5 ರಂದು ರಾಜ್ಯ ಪಡಿತರ ವಿತರಕರ ರಾಜ್ಯ ಮಟ್ಟದ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಸಿಎಂ ಯಡಿಯೂರಪ್ಪ, ಆಹಾರ ಸಚಿವ ಕೆ. ಗೋಪಾಲಯ್ಯ ಹಾಗೂ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಡಿತರ ವಿತರಕರ ಮಾಲೀಕರ ಹಾಗೂ ಕಾರ್ಡುದಾರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ದಿನನಿತ್ಯದ ಬಳಕೆಗೆ ಬೇಕಾಗುವ ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಸೋಪು ಪದಾರ್ಥಗಳ ವಿತರಣೆಯ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.