ಮಂಡ್ಯ: ಗೌರಿ ಹಬ್ಬದ ನಿಮಿತ್ತ ಸಿಎಂ ಯಡಿಯೂರಪ್ಪ ಕಾವೇರಿಗೆ ಬಾಗಿನ ಅರ್ಪಿಸಿದರು. ಸಿಎಂಗೆ ಸಚಿವರು, ಜನಪ್ರತಿನಿಧಿಗಳು ಸಾಥ್ ನೀಡಿದರು.
ಬಾಗಿನ ಸಲ್ಲಿಸಿದ ನಂತರ ಸಿಎಂ ಬಿ.ಎಸ್.ಯಡಿಯೂರಪ್ಪ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಇವರಿಗೆ ಸಚಿವರಾದ ರಮೇಶ್ ಜಾರಕಿಹೊಳಿ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ ಸಾಥ್ ನೀಡಿದರು.
ಕಾವೇರಿಗೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ ನಂತರ ಮಾತನಾಡಿದ ಸಿಎಂ, ಅತ್ಯಂತ ಸಂತಸ ತಂದ ಗಳಿಗೆ ಇದು. 5ನೇ ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಸೌಭಾಗ್ಯ ನನ್ನದು. ಬೃಂದಾವನ ವಿಶ್ವದರ್ಜೆಗೇರಿಸಲು ಸರ್ಕಾರದ ಚಿಂತನೆ ಇದೆ. ಕೇಂದ್ರದ ಅನುಮತಿ ಪಡೆದು ಮೇಕೆದಾಟು ಯೋಜನೆ ಜಾರಿ ಮಾಡಲಾಗುವುದು ಎಂದರು.
ನೀರಾವರಿಗೆ ನಮ್ಮ ಸರ್ಕಾರದ ಪ್ರಥಮ ಆದ್ಯತೆ. ಇದುವರೆಗೂ ನೀರಾವರಿ ಯೋಜನೆಗಳಿಗೆ 74 ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ರೈತರ ಜಮೀನಿಗೆ ನೀರೊದಗಿಸುವ ಯೋಜನೆ ಆರಂಭ ಮಾಡಲಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿವೆ. ಇದು ಅತ್ಯಂತ ಸಂತಸದ ವಿಚಾರ ಎಂದರು. 8.48 ಕೋಟಿ ವೆಚ್ಚದಲ್ಲಿ ಹೊಸದಾಗಿ 16 ಗೇಟ್ಗಳ ಅಳವಡಿಕೆ ಮಾಡಲಾಗಿದೆ. ಸರ್ಕಾರ ರೈತ ಪರವಾಗಿದೆ ಎಂದ ಸಿಎಂ, ನಂತರ ಕಬಿನಿ ಕಡೆ ಪ್ರಯಾಣ ಬೆಳೆಸಿದರು.