ಮಂಡ್ಯ ಶಾಸಕ ರವಿಕುಮಾರ್ ಗಣಿಗರಿಂದ ಸಿಎಂ ಭೇಟಿ ಕುರಿತು ಮಾಹಿತಿ ಮಂಡ್ಯ:ಸಕ್ಕರೆನಾಡು ಮಂಡ್ಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುವರು. ಸಿಎಂಗೆ ಅದ್ಧೂರಿ ಸ್ವಾಗತ ಕೋರಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದರೆ, ಕಾವೇರಿ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆಯೂ ಇದ್ದು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸಿಎಂ ಆದ ಬಳಿಕ ಸಿದ್ದರಾಮಯ್ಯ 2ನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಂಗಳವಾರ ಮಧ್ಯಾಹ್ನ 12.30ಕ್ಕೆ ಆಗಮಿಸುವ ಸಿಎಂ, ಮೊದಲಿಗೆ ಕಲ್ಲಹಳ್ಳಿ ಬಳಿ ಖಾಸಗಿ ಕಲ್ಯಾಣ ಮಂಪಟದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ಅಂತರ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಸಾಥ್ ನೀಡಲಿದ್ದಾರೆ. ಮಂಡ್ಯದ ಫ್ಯಾಕ್ಟರಿ ಸರ್ಕಲ್ನಿಂದ ಸಂಜಯ್ ಸರ್ಕಲ್ವರೆಗೂ ಬೃಹತ್ ಮೆರವಣಿಗೆ ನಡೆಸಲು ಯೋಜಿಸಲಾಗಿದೆ.
ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಜಿಲ್ಲೆಗೆ ಏನಾದರೂ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಜನರದ್ದು. ಈ ಮಧ್ಯೆ ಸಿಡಬ್ಲ್ಯುಆರ್‌ಸಿ ಕೂಡಾ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು, ರೈತರು ಹೋರಾಟಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಕಾವೇರಿ ನೀರು, ಬೆಳೆ ವಿಚಾರವಾಗಿ ಸಿಎಂ ಜಿಲ್ಲೆಗೆ ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೋರಾಟಗಾರರು ಒತ್ತಾಯ ಮಾಡುತ್ತಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ, ರೈತರ ಆಕ್ರೋಶ:ತಮಿಳುನಾಡಿಗೆ ಪ್ರತಿನಿತ್ಯ 2,600 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಇಂದು ಆದೇಶಿಸಿದೆ. ಇದು ಜಿಲ್ಲೆಯ ರೈತರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ. ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರ, ಪ್ರಾಧಿಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಈ ಆದೇಶ ಬರುತ್ತಿದ್ದಂತೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು, ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನೀರನ್ನು ಬಿಡಬಾರದು ಎಂದು ಒತ್ತಾಯ ಮಾಡಿದರು.
ಇದನ್ನೂ ಓದಿ:ಶಾಸಕ ರವಿ ಗಣಿಗ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಸತೀಶ್ ಜಾರಕಿಹೊಳಿ