ಮಂಡ್ಯ: ಸಾಲಬಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ನಡೆದಿದೆ.
ಸಿ.ಎಂ. ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿದ್ದ ರೈತ ಸುರೇಶ್(46) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.ಗೆ ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಆಹ್ವಾನಿಸಿದ್ದಾನೆ.
ಸೆಲ್ಫಿ ವಿಡಿಯೋದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಸಿ.ಎಂ.ಗೆ ಮನವಿ ಮಾಡಿದ್ದು, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಸೇರಿದಂತೆ ಮೈತ್ರಿ ಪಕ್ಷದವರು ಕುಮಾರಣ್ಣ ಅವರ ಕಾಲೆಳೆಯದಂತೆ ಕೇಳಿಕೊಂಡಿದ್ದಾರೆ. ಅಲ್ಲದೇ ಸಚಿವ ಡಿ.ಕೆ. ಶಿವಕುಮಾರ್ಗೂ ಸರ್ಕಾರ ಉಳಿಸುವಂತೆ ರೈತ ಕೋರಿದ್ದಾರೆ.
ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ ತನ್ನ ಸಾವಿನ ನಂತರ ಮಗ ಸಾಲ ತೀರಿಸುತ್ತಾನೆ, ಆದ್ರೆ ಯಾರೂ ಕೂಡ ಆತನಿಗೆ ಒತ್ತಡ ಹಾಕಬೇಡಿ. ತಮಗೂ ಕೆಲವರ ಕಡೆಯಿಂದ ಹಣ ಬರಬೇಕಿದದ್ದು, ಸಾವಿನ ಬಳಿಕವಾದ್ರೂ ಆ ಹಣ ಕೊಡಿ. ಎಂಟು ದಿನಗಳ ಹಿಂದೆ ತಾನು ಸಾಯುವ ಮನಸ್ಸು ಮಾಡಿದ್ದೆ, ಆದ್ರೆ ಕುಟುಂಬದವರು ಧರ್ಮಸ್ಥಳಕ್ಕೆ ಹೋಗಿದ್ರು. ಸಣ್ಣ ಅಪಘಾತದಿಂದ ಅವ್ರು ಬರಲು ತಡವಾಯ್ತು. ಅವ್ರ ಮುಖ ನೋಡಿ ಸಾಯ್ತಿರೋದಾಗಿ ರೈತ ಸುರೇಶ್ ಭಾವಕರಾಗಿ ಮಾತನಾಡಿದ್ದಾರೆ. ಬಳಿಕ ಸಾವಿನ ಮನೆ ಕದ ತಟ್ಟಿದ್ದಾರೆ.