ಮಂಡ್ಯ: ಸಾಲಬಾಧೆ, ನಿಖಿಲ್ ಸೋಲಿನ ಖಿನ್ನತೆ, ಕೆರೆ ತುಂಬದೇ ಹತಾಶೆ ಈ ಎಲ್ಲಾ ಕಾರಣಗಳಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬ ಸಿಎಂ ಕುಮಾರಸ್ವಾಮಿ ಅವರ ಸಹಾಯದ ನಿರೀಕ್ಷೆಯಲ್ಲಿದೆ.
ನೆನಪಾಯಿತು ಮಂಡ್ಯ... ಮೃತ ರೈತನ ಮನೆಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ
ಸಾಲಬಾಧೆ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಲು ಭೇಟಿ ನೀಡುತ್ತಿದ್ದಾರೆ.
ಇಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ಸಿಎಂ ಕುಮಾರಸ್ವಾಮಿ ರೈತ ಸುರೇಶ್ ನಿವಾಸಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಸದಸ್ಯರಿಗೆ ನೌಕರಿಯ ಬೇಡಿಕೆ ಇಡಲು ಮೃತನ ಕುಟುಂಬಸ್ಥರು ಮುಂದಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದ ಸುರೇಶ್ ಎರಡು ದಿನಗಳ ಹಿಂದೆ ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸೆಲ್ಫಿಯಲ್ಲಿ ಸಾಲದ ಸಮಸ್ಯೆ, ಕೆರೆ ತುಂಬಿಸಬೇಕು ಎಂದು ಸಿಎಂ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಇದರ ಜೊತೆಗೆ ಸಹಾಯಕ್ಕೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮುಂದಾಗಬೇಕು. ಸರ್ಕಾರ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯ ಮಾಡಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಈ ಕುರಿತು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಾಲ ಮಾಡಿ 6ರಿಂದ 7 ಕೊಳವೆ ಬಾವಿ ತೋಡಿಸಿದ್ದರು. ನೀರು ಬಂದಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಪತ್ನಿ ಜಯಶೀಲ ಹೇಳಿದ್ದಾರೆ. ಇನ್ನು ಪುತ್ರಿ ಸುವರ್ಣ ಪ್ರತಿಕ್ರಿಯೆ ನೀಡಿ, ನಮಗೆ ಎರಡು ಎಕರೆ ಜಮೀನು ಇದೆ. ಸಾಲ ಇದೆ ಅಂದಿದ್ದರೆ ಶಿಕ್ಷಣ ನಿಲ್ಲಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ ಎಂದು ಕಣ್ಣೀರು ಹಾಕಿದರು. ವಯಸ್ಸಾದ ತಂದೆ, ತಾಯಿ ಹಾಗೂ ಪುತ್ರ, ಪುತ್ರಿಯರ ಹೊಣೆ ಸುರೇಶ್ ಮೇಲೆ ಇತ್ತು. ವ್ಯವಸಾಯ ಮಾಡಿಕೊಂಡೇ ಇಡೀ ಕುಟುಂಬ ಜೀವನ ನಡೆಸುತ್ತಿತ್ತು.