ಮಂಡ್ಯ :ಕೆಆರ್‌ಎಸ್ ಡ್ಯಾಂ ತುಂಬಿದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಬಾಗಿನ ಅರ್ಪಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ.
ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಈ ವೇಳೆ ಮಾತನಾಡಿದ ಅವರು, ಮೊದಲ ಬಾರಿಗೆ ಬಂದು ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಕೆಆರ್‌ಎಸ್‌ಗೆ ಒಂದು ಇತಿಹಾಸ ಇದೆ. ಅವತ್ತಿನ ಮಹಾರಾಜರು ಮತ್ತು ಆಡಳಿತದವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ ಮನಸ್ಸು ಮಾಡದಿದ್ರೆ, ಮಂಡ್ಯ- ಮೈಸೂರು ಇಷ್ಟರ ಮಟ್ಟಿಗೆ ಇರುತ್ತಿರಲಿಲ್ಲ ಎಂದು ತಿಳಿಸಿದರು.
ದಶಕಗಳಿಂದ ಕಾವೇರಿ ಮಾತೆ ಅನ್ನವನ್ನು ಕೊಡ್ತಿದ್ದಾಳೆ. ಕೆಆರ್‌ಎಸ್ ಡ್ಯಾಂ ಅನ್ನು ನಾವು ಮುಂಬರುವ 100 ವರ್ಷ ಉಳಿಸಿಕೊಳ್ಳಲು ಸಂಪೂರ್ಣ ಆಧುನೀಕರಣ ಮಾಡಬೇಕು ಎಂದು ಹೇಳಿದರು. ನೀರಾವರಿ ಸಚಿವನಾಗಿದ್ದಾಗ ಗೇಟ್ ನೋಡಿದ್ದೆ. ಆಗ ಗೇಟ್ನಲ್ಲಿ ರಂಧ್ರಗಳಿದ್ದವು.
ಡ್ಯಾಂಗೆ 75 ವರ್ಷವಾಗಿದೆ. ಗೇಟ್ ಬದಲಾವಣೆ ಮಾಡಿಲ್ಲ. ಎರಡು ದಿನ ನನಗೆ ನಿದ್ದೆ ಬರಲಿಲ್ಲ. ಎಲ್ಲಾ ಮ್ಯಾಪ್ ತಯಾರು ಮಾಡಿ ಎಂದು ಹೇಳಿದ್ದೆ. ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟೆಗಳಲ್ಲಿ 14 ನೆಲಸಮವಾಗಿವೆ. 11 ಅಣೆಕಟ್ಟುಗಳನ್ನು ಆಧುನೀಕರಣ ಮಾಡಲಾಗಿದೆ ಎಂದು ತಿಳಿಸಿದರು.
1600 ಕೋಟಿ ವೆಚ್ಚದಲ್ಲಿ ವಿಸಿ ನಾಲೆ ಅಧುನೀಕರಣ ಮಾಡಲು ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇವೆ. ಅನ್ನ ಕೊಡುವ ನೀರಾವರಿ ಯೋಜನೆ, ಎಲ್ಲದಕ್ಕೂ ನಮ್ಮ ಸರ್ಕಾರ ಸಹಕಾರ ಕೊಡುತ್ತದೆ.