ಮಂಡ್ಯ:ಪೌರಕಾರ್ಮಿಕನೋರ್ವ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದು, ಆತನ ಮೂರು ಮಕ್ಕಳು ಬೀದಿಪಾಲಾಗಿರುವ ಘಟನೆ ಸಕ್ಕರೆ ನಾಡಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಸಿದ್ದಾರ್ಥ ನಗರದ ನಾರಾಯಣ್ (35) ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ಪೌರಕಾರ್ಮಿಕ. ಈತ ಮದ್ದೂರು ಪುರಸಭೆ ಮುಖ್ಯಾಧಿಕಾರಿ ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.
ಪೌರಕಾರ್ಮಿಕನ ಹೆಂಡತಿ ಮೂರು ಮಕ್ಕಳನ್ನು ಹೆತ್ತು ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ನಂತರ ಪುಟ್ಟ ಕಂದಮ್ಮಗಳ ಜವಾಬ್ದಾರಿ ಹೊತ್ತಿದ್ದವನಿಗೆ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರಂತೆ. ಕೊನೆಗೆ ಬೇಸತ್ತ ಪೌರಕಾರ್ಮಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಕಳೆದ ನಾಲ್ಕು ತಿಂಗಳ ಹಿಂದೆ ನಾರಾಯಣ್, ಮ್ಯಾನ್ ಹೋಲ್ಗೆ ಇಳಿದು ಸ್ವಚ್ಛ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಯಾವುದೇ ಸುರಕ್ಷತಾ ಸಲಕರಣೆ ನೀಡದೇ ಬರಿಕೈಯಲ್ಲಿ ಮ್ಯಾನ್ ಹೋಲ್ ಸ್ವಚ್ಛ ಮಾಡಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿತ್ತು. ಈ ಪ್ರಕರಣವಾದ ಬಳಿಕ ನಾರಾಯಣ್‌ಗೆ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳ ಮತ್ತಷ್ಟು ಹೆಚ್ಚಾಗಿತ್ತಂತೆ.
ಅಧಿಕಾರಿಗಳ ಕಿರುಕುಳ ಸಹಿಸಿಕೊಂಡೇ ಕೆಲಸ ಮಾಡ್ತಿದ್ದರು. ಐದು ದಿನದ ಹಿಂದೆಷ್ಟೇ ಕೋವಿಡ್ ವಾಕ್ಸಿನ್ ತೆಗೆದುಕೊಂಡಿದ್ದ ನಾರಾಯಣ್, ಜ್ವರದಿಂದ ಎರಡು ದಿನ ಕೆಲಸಕ್ಕೆ ಹೋಗಿರಲಿಲ್ಲ. ನಿನ್ನೆ ಕೆಲಸಕ್ಕೆ ಹಾಜರಾಗಲು ಹೋದಾಗ ಯಾಕೆ ಬಂದಿದ್ದೀಯಾ ಎಂದು ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರಂತೆ. ಅಲ್ಲದೇ ಅಧಿಕಾರಿಗಳು ಈ ವೇಳೆ ನಿನ್ನನ್ನ ಕೆಲಸದಿಂದ ತೆಗೆಯುತ್ತೇವೆ ಎಂದು ಹೆದರಿಸುತ್ತಿದ್ದರು ಎಂದು ಸ್ನೇಹಿತರೊಂದಿಗೂ ನಾರಾಯಣ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಆತನಿಗೆ ನಾವು ಕಿರುಕುಳ ನೀಡಿಲ್ಲ. ಮ್ಯಾನ್ ಹೋಲ್ಗೆ ಇಳಿಯುವಂತೆ ಕೂಡ ಹೇಳಿರಲಿಲ್ಲ. ಇದೊಂದು ಸುಳ್ಳು ಆರೋಪ ಎಂದು ಡಿಸಿ ವರದಿ ನೀಡಿದ್ದಾರೆ. ಕುಡಿದು ಮಲಗಿದ್ದಾಗ ಯಾರೋ ಕರೆದುಕೊಂಡು ಇಳಿಸಿದ್ದಾರೆಂದು ಆತನೇ ಒಪ್ಪಿಕೊಂಡಿದ್ದಾನೆ ಎಂದುಪುರಸಭೆ ಮುಖ್ಯಾಧಿಕಾರಿ ಮುಗರುಗೇಶ್ ಸಮಜಾಹಿಸಿ ನೀಡಿದ್ದಾರೆ.