ಮಂಡ್ಯ :ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಹಾನಗಲ್ನಲ್ಲಿ ನಾವು ನಿರೀಕ್ಷಿಸಿದಷ್ಟು ಮತ ಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶ್ರೀರಂಗಪಟ್ಟಣದ ಕೆಆರ್‌ಎಸ್‌ನಲ್ಲಿ ಮಾತನಾಡಿದ ಅವರು, ನಾವು ಹೋರಾಟ ಮಾಡಿದ್ದೇವೆ. ಆದರೂ ಉದಾಸಿ ಅವರಿಗೆ ಸಲ್ಲಬೇಕಿದ್ದ ಮತಗಳ ಬೆಂಬಲ ಪಡೆದುಕೊಳ್ಳಲು ನಮಗೆ ಸಾಧ್ಯವಾಗಿಲ್ಲ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ 2-3 ವರ್ಷದಲ್ಲಿ ಮಾಡಿರುವ ಕೆಲಸವನ್ನ ನೋಡಿ ಜನ ಕೈ ಹಿಡಿದಿದ್ದಾರೆ. ಹೀಗಾಗಿ, ಬಿಜೆಪಿಗೆ ಹಿನ್ನಡೆಯಾಗಿದೆ. ನಾನು ಅದನ್ನ ಒಪ್ಪಿಕೊಳ್ಳುತ್ತೇನೆ ಎಂದರು.
ಉಪಚುನಾವಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು.. ನಮ್ಮ ಪಕ್ಷದ ಹಿರಿಯರು, ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದರು. ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ಎಲೆಕ್ಷನ್‌ನಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದ್ದೇವೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಈ ಫಲಿತಾಂಶವನ್ನ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಮುಂದೆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು.
ಸಿಂದಗಿ ಫಲಿತಾಂಶದಲ್ಲಿ ಹಣದ ಅಬ್ಬರ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಸೋತವರ ಸ್ಟ್ಯಾಂಡರ್ಡ್ ಫಾರ್ಮೆಟ್ ಇದು. ಇದು ಹಣ, ತೋಳ್ಬಲದಿಂದ ಗೆಲುವಾಗಿದೆ ಅಂತಾರೆ.
ಜನ ಬೆಂಬಲ ಇಲ್ಲದೆ ಯಾವುದೇ ಚುನಾವಣೆ ಗೆಲ್ಲೋಕೆ ಆಗಲ್ಲ. ಮುಂದಿನ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತೇವೆ. ಗೆಲುವಿನ ರೀತಿ ಸೋಲನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದ ಅವರು, ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ ಎಂದರು.
ಸರ್ಕಾರದಿಂದಲೇ ಪುನೀತ್ ರಾಜ್ ಕುಮಾರ್ ಸ್ಮಾರಕ ನಿರ್ಮಾಣ ವಿಚಾರವಾಗಿ ಈ ಬಗ್ಗೆ ಅವರ ಕುಟುಂಬದ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.