ಮಂಡ್ಯ: ಕಳೆದ ವರ್ಷ ಕೋವಿಡ್‌ನಿಂದಾಗಿ ವೈರಮುಡಿ ಬ್ರಹ್ಮೋತ್ಸವ ರದ್ದಾದ ಕಾರಣಕ್ಕೆ ಪ್ರಾಯಶ್ಚಿತ್ತ ಪೂರ್ವಕವಾಗಿ ಮಾರ್ಚ್ 5 ರಂದು ಸಹಸ್ರ ಕಳಶಾಭಿಷೇಕ ಧಾರ್ಮಿಕ ಕಾರ್ಯಕ್ರಮ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ಶ್ರೀವೈರಮುಡಿ ಬ್ರಹ್ಮೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾ. 3 ರಿಂದ 6ರ ವರೆಗೆ ಕಳಶಾಭಿಷೇಕ ನಡೆಯುತ್ತದೆ. ಮಾ.19 ರಿಂದ ಉತ್ಸವ ಪ್ರಾರಂಭಗೊಳ್ಳಲಿದ್ದು, ಮಾರ್ಚ್ 24 ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವ, ಮಾ.31 ರಂದು ವೈರಮುಡಿ ಬ್ರಹ್ಮೋತ್ಸವ ಜರುಗಲಿದೆ ಎಂದರು.
ಈ ಉತ್ಸವಕ್ಕೆ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಅಗತ್ಯ ಸಿದ್ಧತಾ ಕ್ರಮ ಕೈಗೊಳ್ಳಿ. ಶುದ್ಧ ಕುಡಿಯುವ ನೀರು, ಸ್ವಚ್ಛತೆ, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ಆ್ಯಂಬುಲೆನ್ಸ್ ಹಾಗೂ ಶಾಂತಿ ಸುವ್ಯವಸ್ಥೆ ಪಾಲನೆ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ದೇವಾಲಯಕ್ಕೆ ವಿಶೇಷ ದೀಪಾಲಂಕಾರ, ವ್ಯವಸ್ಥಿತ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆ, ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ, ಮುಖ್ಯ ರಸ್ತೆಗಳ ದುರಸ್ತಿ, ಶೌಚಾಲಯ ಗೃಹ ಸೇರಿದಂತೆ ಬ್ರಹ್ಮೋತ್ಸವಕ್ಕೆ ಆಗಮಿಸುವವರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.