ಕರ್ನಾಟಕ

karnataka

ETV Bharat / state

ಲಾರಿ ಮಾಲೀಕರಿಂದ ಸುಲಿಗೆ ಮಾಡಲು ಕಂಡುಕೊಂಡ ದಾರಿ ಎಂಥಾದ್ದು ಗೊತ್ತೇ..? ಮುಂದೆ ಆಗಿದ್ದಾದರೂ ಏನು?

ವಾಣಿಜ್ಯ ತೆರಿಗೆ ಅಧಿಕಾರಿ ಸೋಗಿನಲ್ಲಿ ಬಂದು ಲಾರಿ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ರಾಜಾಜಿನಗರದ ನಿವಾಸಿ ಚಂದ್ರಪ್ಪ ಅಲಿಯಾಸ್ ಚಂದ್ರೇಗೌಡನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

By

Published : Sep 29, 2021, 11:44 AM IST

ccb arrested Fraudster at bangalore
ವಂಚಕ ಚಂದ್ರೇಗೌಡ ಅಂದರ್​​

ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿಯ ಸೋಗಿನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಧಾನಿಯ ರಾಜಾಜಿನಗರದ ನಿವಾಸಿ ಚಂದ್ರಪ್ಪ ಅಲಿಯಾಸ್ ಚಂದ್ರೇಗೌಡ (52) ಬಂಧಿತ. ಈತ ಹಲವು ವರ್ಷಗಳಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಅಧಿಕಾರಿಗಳು ನಿರ್ವಹಿಸುತ್ತಿದ್ದ ಕಾರ್ಯಗಳನ್ನು ಗಮನಿಸಿದ್ದ.

ಇತ್ತೀಚೆಗೆ ನಗರದ ಗಡಿ ಭಾಗ ಅತ್ತಿಬೆಲೆಯಿಂದ ಹುಬ್ಬಳ್ಳಿಗೆ ಯಾವುದೇ ತಡೆಯಿಲ್ಲದೇ ಸರಕು ಸಾಗಿಸಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯನ್ನು ಈತ ಇಟ್ಟಿದ್ದ. ಆದರೆ, ಸ್ಪಂದಿಸದ ಲಾರಿ ಚಾಲಕ ಅಲ್ಲಿಂದ ತೆರಳಿದ್ದ.

ನಂತರ ಆಗಸ್ಟ್ 27ರಂದು ಅದೇ ಕಂಪನಿಯ ಲಾರಿಯನ್ನು ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ತಪಾಸಣೆಗೆ ಎಂದು ನಿಲುಗಡೆ ಮಾಡಿದಾಗ ಅಲ್ಲಿಗೆ ಬಂದ ಚಂದ್ರಪ್ಪ ಚಾಲಕನಿಂದ ಸರಕಿಗೆ ಸಂಬಂಧಿಸಿದ ಬಿಲ್ ಗಳನ್ನು ಕಸಿದುಕೊಂಡು 50 ಸಾವಿರ ರೂ. ಪಡೆದು ಲಾರಿಯನ್ನು ಕಳುಹಿಸಿದ್ದ. ನಂತರ ತುಮಕೂರು ಜಿಎಸ್‌ಟಿ ಅಧಿಕಾರಿಗಳಿಗೆ ಕರೆ ಮಾಡಿದ ಚಂದ್ರಪ್ಪ ಬಿಲ್‌ಗಳಿಲ್ಲದ ಸರಕು ತುಂಬಿದ ಲಾರಿ ತುಮಕೂರು ಕಡೆ ಬರುತ್ತಿದೆ ಎಂದು ಮಾಹಿತಿ ಕೊಟ್ಟಿದ್ದ.

ಜಿಎಸ್‌ಟಿ ಅಧಿಕಾರಿ ಎಂದು ವಂಚನೆ:

ಅತ್ತಿಬೆಲೆ ಸೇರಿದಂತೆ ಹಲವು ಕಡೆ ತಾನು ಕೇಂದ್ರ ಜಿಎಸ್‌ಟಿ ಅಧಿಕಾರಿ ಎಂದು ಖದರ್ ತೋರಿಸಿ ತೆರಿಗೆ ಪಾವತಿಸಿರುವ ಬಗೆಗಿನ ದಾಖಲೆ ಪಡೆಯುತ್ತಿದ್ದ. ನಂತರ 50 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಲಂಚ ಕೊಟ್ಟರೆ ಮಾತ್ರ ಲಾರಿ ಬಿಡುವುದಾಗಿ ಬೆದರಿಸುತ್ತಿದ್ದ. ಆತ ನಿಜವಾದ ಅಧಿಕಾರಿ ಎಂದುಕೊಂಡು ಕೆಲ ಲಾರಿ ಮಾಲೀಕರು 25 ರಿಂದ 50 ಸಾವಿರ ರೂ. ಕೊಟ್ಟು ಲಾರಿ ಬಿಡಿಸಿಕೊಂಡಿದ್ದರು.

ಜಿಎಸ್‌ಟಿ ಪಾವತಿಸದ ಲಾರಿಗಳೇ ಟಾರ್ಗೆಟ್​:

ಸರಿಯಾಗಿ ಜಿಎಸ್‌ಟಿ ಪಾವತಿಸದ ಲಾರಿಗಳನ್ನೇ ಚಂದ್ರಪ್ಪ ಟಾರ್ಗೆಟ್ ಮಾಡುತ್ತಿದ್ದ. ಮಾಲೀಕರು ಹಣ ಕೊಡದಿದ್ದರೆ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಆಯಾ ಲಾರಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಆಗ ನೈಜ ಅಧಿಕಾರಿಗಳು ಲಾರಿಗಳನ್ನು ತಪಾಸಣೆ ನಡೆಸಿ ಜಪ್ತಿ ಮಾಡುತ್ತಿದ್ದರು. ಆದರೆ, ನಿಜವಾದ ಅಧಿಕಾರಿಗಳಿಗೆ ಹಮಾಲಿ ಚಂದ್ರಪ್ಪ ಸುಲಿಗೆ ಮಾಡುತ್ತಿದ್ದ ಸಂಗತಿ ಗೊತ್ತಿರಲಿಲ್ಲ.

ಸಿಕ್ಕಿಬಿದ್ದಿದ್ದು ಹೇಗೆ?

ಆಗಸ್ಟ್ 2ರಂದು ಮುಂಬೈ ಮೂಲದ ಲಾರಿಯನ್ನು ಚಂದ್ರಪ್ಪ ಅತ್ತಿಬೆಲೆ ಬಳಿ ತಡೆದಿದ್ದ. ಅತ್ತಿಬೆಲೆ, ಬೆಂಗಳೂರು, ತುಮಕೂರು ಮತ್ತು ಹುಬ್ಬಳ್ಳಿ ಪ್ರದೇಶಗಳಿಗೆ ನಾನೇ ಉಸ್ತುವಾರಿ ಅಧಿಕಾರಿ ಎಂದು ಪೋಸ್ ಕೊಟ್ಟಿದ್ದ. ತುಮಕೂರಿನಲ್ಲಿ ಜಿಎಸ್‌ಟಿ ಅಧಿಕಾರಿಗಳು ಲಾರಿಯನ್ನು ಜಪ್ತಿ ಮಾಡಿದ್ದರು. ನಂತರ ಮುಂಬೈ ಮೂಲದ ಕಂಪನಿ ಮ್ಯಾನೇಜರ್ ಬಸಂತ್‌ ಕುಮಾರ್‌ ಬಂಗೂರ್‌ ಎನ್ನುವವರು ಜಿಎಸ್‌ಟಿ ದಂಡ ಪಾವತಿಸಿ ಲಾರಿ ಬಿಡಿಸಿಕೊಂಡು ಚಂದ್ರಪ್ಪ ಬಗ್ಗೆ ವಿಚಾರಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಂತಹ ಹೆಸರಿನ ವ್ಯಕ್ತಿ ಯಾರೂ ಇಲ್ಲ ಎಂಬುದು ಆಗ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದು... ಕಾರಣ?

ಸತ್ಯ ತಿಳಿದ ಬಸಂತ್ ಕುಮಾರ್ ಈ ಕುರಿತು ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಬಸವರಾಜ್‌ಗೆ ದೂರು ಸಲ್ಲಿಸಿದ್ದರು. ಬಸವರಾಜ್ ಕೋರಮಂಗಲ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸೋಮವಾರ ಅತ್ತಿಬೆಲೆ ಬಳಿ ಲಾರಿಯೊಂದನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಚಂದ್ರಪ್ಪನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details