ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ; ಇಂದಿನ ನೀರು ನಿಯಂತ್ರಣ ಸಮಿತಿ ಸಭೆಯತ್ತ ರೈತರ ಚಿತ್ತ - ಕೆಆರ್​ಎಸ್ ಜಲಾಶಯ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕಳೆದ ಹಲವು ದಿನಗಳಿಂದ ರೈತರು ಜಿಲ್ಲೆಯಾದ್ಯಂತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಸಭೆ ನಡೆಯಲಿದೆ.

protest in Mandaya
ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ..

By ETV Bharat Karnataka Team

Published : Sep 12, 2023, 8:46 AM IST

ಮಂಡ್ಯದಲ್ಲಿ ಕಾವೇರಿಗಾಗಿ ಹೋರಾಟ

ಮಂಡ್ಯ: ಕೃಷ್ಣರಾಜ ಸಾಗರ (ಕೆಆರ್​ಎಸ್) ಜಲಾಶಯದಿಂದ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ನೀರು ಹರಿಸುವುದನ್ನು ಸರ್ಕಾರ ಸ್ಥಗಿತಗೊಳಿಸಿದೆ. ಆದರೂ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಇದರ ನಡುವೆ ಇಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಸಭೆ ನಡೆಯಲಿದ್ದು, ರೈತರು ಆ ಕಡೆಗೆ ದೃಷ್ಟಿ ನೆಟ್ಟಿದ್ದಾರೆ.

ಸಮಿತಿಯ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಕಳೆದ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿದೆ. ಹೀಗಾಗಿ ಹೋರಾಟದ ಕಾವು ಜೋರಾಗಿತ್ತು. ಕಳೆದ 3 ದಿನಗಳಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಶ್ರೀರಂಗಪಟ್ಟಣದಲ್ಲಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ನಿನ್ನೆ (ಸೋಮವಾರ) ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆಗೆ ಸಜ್ಜಾಗಿದ್ದರು. ಆದರೆ ಇಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ ನಿಗದಿಯಾಗಿದ್ದು, ಮುಂದಿನ ನಿರ್ಧಾರ ಹೊರಬೀಳಲಿದೆ. ಈ ಸಭೆಯಲ್ಲಿ ಯಾವ ರೀತಿಯ ತೀರ್ಮಾನವಾಗಲಿದೆ ಎಂಬುದನ್ನು ನೋಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೀಗಾಗಿ ಸಭೆ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಮತ್ತೆ ವ್ಯತಿರಿಕ್ತ ಆದೇಶ ಹೊರಬಂದರೆ ಉಗ್ರ ಹೋರಾಟಕ್ಕೆ ರೈತರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:ಕಾವೇರಿ ಹೋರಾಟ: ತಮಿಳುನಾಡಿಗೆ ನೀರು ನಿಲ್ಲಿಸಲು ರಕ್ತದಲ್ಲಿ ಸಹಿ ಮಾಡಿದ ಪತ್ರ ರಾಜ್ಯಪಾಲರಿಗೆ ರವಾನೆ

"ಕೆಆರ್​ಎಸ್ ಜಲಾಶಯವು ಗರಿಷ್ಠ 124.80 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಇದೀಗ ಜಲಾಶಯದಲ್ಲಿ 98.06 ಅಡಿ ಮಾತ್ರ ನೀರು ಸಂಗ್ರಹವಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇಂದು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ ಇದೆ. ಒಂದು ವೇಳೆ ಮತ್ತೆ ನೀರು ಹರಿಸುವಂತೆ ಆದೇಶ ಬಂದರೆ ಮಂಡ್ಯದಲ್ಲಿ ಹೋರಾಟದ ಕಾವು ಬೇರೆ ಸ್ವರೂಪ ಪಡೆಯಲಿದೆ"- ರೈತ ಹೋರಾಟಗಾರ ನಾಗರಾಜು.

ಕಾವೇರಿ ಜಲವಿವಾದ-ಸಂಕ್ಷಿಪ್ತ ಮಾಹಿತಿ: ನೈರುತ್ಯ ಮುಂಗಾರು ಕೊರತೆ ಉಂಟಾದಾಗಲೆಲ್ಲ ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ದೀರ್ಘಕಾಲದ ವಿವಾದ ತಲೆ ಎತ್ತುತ್ತದೆ. ಉಭಯ ರಾಜ್ಯಗಳ (ಕರ್ನಾಟಕ ಮತ್ತು ತಮಿಳುನಾಡು) ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಇಂದು, ನಿನ್ನೆಯದ್ದಲ್ಲ. ನೀರು ಹಂಚಿಕೆ ಸಂಬಂಧ ಅಂದಿನ ಮದ್ರಾಸ್‌ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನದ ಮಧ್ಯೆ 1892ರಲ್ಲಿ ಮತ್ತು 1924ರಲ್ಲಿ ಒ‍ಪ್ಪಂದ ಆಗಿತ್ತು.

ಈ ಒಪ್ಪಂದದಂತೆ, ಮೈಸೂರು ಸಂಸ್ಥಾನದ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ವಾಡಿಕೆಗಿಂತ ಹೆಚ್ಚು ಮಳೆಯಾದರೆ, ನೀರು ಬಿಡಲು ಅಡ್ಡಿಯಿರಲಿಲ್ಲ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾದಾಗ, ನೀರಿನ ಕೊರತೆ ಉಂಟಾದರೆ ಹಂಚಿಕೆ ಸಮಸ್ಯೆ ತಲೆದೋರುತ್ತಿತ್ತು.

ಸಂಕಷ್ಟ ಸೂತ್ರ ಇಲ್ಲದಿರುವುದೇ ವಿವಾದಕ್ಕೆ ಕಾರಣ: ಸ್ವಾತಂತ್ರ್ಯಾ ನಂತರವೂ ಈ ಸಮಸ್ಯೆ ಮುಂದುವರಿದಿದೆ. ಇದರೊಂದಿಗೆ ಯಾವ ರಾಜ್ಯಕ್ಕೆ ಎಷ್ಟು ನೀರು ಬೇಕೆಂಬುದು ವಿವಾದದ ಮತ್ತೊಂದು ಮುಖ್ಯ ವಿಷಯ. ಹಲವು ದಶಕಗಳ ಕಾಲ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿನ ಹೋರಾಟದ ಬಳಿಕ ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಬೇಕು ಎಂಬುದು ನಿರ್ಧಾರವಾಗಿದೆ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾದರೆ, ನೀರನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಸೂಚಿಸುವ ಸಂಕಷ್ಟ ಸೂತ್ರ ಮಾತ್ರ ಇಲ್ಲ. ಇದು ಉಭಯ ರಾಜ್ಯಗಳ ನಡುವಣ ನೀರು ಹಂಚಿಕೆ ವಿವಾದವನ್ನು ಇನ್ನೂ ಜೀವಂತವಾಗಿರಿಸಿದೆ.

ಇದನ್ನೂ ಓದಿ:ಮಂಡ್ಯದಲ್ಲಿ ಕಾವೇರಿ ಕಿಚ್ಚು: ಕೇಂದ್ರ, ರಾಜ್ಯ ಸರ್ಕಾರಗಳ ಅಣುಕು ಶವಯಾತ್ರೆ.. ಸೆಪ್ಟೆಂಬರ್ 11 ರಂದು ರಾಷ್ಟ್ರೀಯ ಹೆದ್ದಾರಿ ಬಂದ್

ABOUT THE AUTHOR

...view details