ಕಾವೇರಿ ನದಿ ನೀರಿಗಾಗಿ ಹೋರಾಟ ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರೈತರು, ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಸ್ಯಾಂಡಲ್‌ವುಡ್ ನಟರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದು ನೀರು ಹರಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಅನ್ನದಾತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಅನ್ನದಾತರ ಹೋರಾಟಕ್ಕೆ ಬೆಂಬಲ ಸೂಚಿಸಿಲ್ಲ ಎಂದು ಚಿತ್ರರಂಗದವರ ವಿರುದ್ಧ ರೈತರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೈತ ಮುಖಂಡ ನಂಜುಂಡೇಗೌಡ, "ಪ್ರಚಾರ ತೆಗೆದುಕೊಳ್ಳಲು, ರಾಜಕೀಯ ಪ್ರಚಾರ ಮಾಡಲು ಮಾತ್ರ ಮಂಡ್ಯಕ್ಕೆ ನಟರು ಬರುತ್ತಾರೆ. ಕಾವೇರಿ ವಿಚಾರದಲ್ಲಿ ಮಾತ್ರ ಮಾತನಾಡುತ್ತಿಲ್ಲ. ಅವರಿಗೆ ಹಣ ಮಾತ್ರ ಬೇಕಿದೆ" ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಪ್ರಾಧಿಕಾರದ ಆದೇಶಕ್ಕೆ ರೈತರ ಕಪ್ಪು ಬಾವುಟ ಪ್ರದರ್ಶನ.. ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಜಲಾಶಯ 124.80 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿ 97.08 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇಂತಹ ಸಂದರ್ಭದಲ್ಲಿ ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಆದೇಶ ಮಾಡಿದೆ. ಈ ಆದೇಶಕ್ಕೆ ಮಣಿದಿರುವ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದು ರೈತರು, ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣ.
ಬುಧವಾರ ಮಂಡ್ಯದ ಸಂಜಯ ಸರ್ಕಲ್ನಲ್ಲಿ ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ, ಕೆ.ಆರ್.ಎಸ್ನಲ್ಲಿ ಕಾವೇರಿ ನೀರಾವರಿ ನಿಗಮದ ಇಇ ಕಚೇರಿಗೆ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿಎಂ, ಡಿಸಿಎಂ, ಮಂಡ್ಯ ಉಸ್ತುವಾರಿ ಸಚಿವ, ಪ್ರಾಧಿಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಜಲವಿವಾದದ ಅರ್ಜಿ ವಿಚಾರಣೆ: ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ಜಲವಿವಾದದ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಸಲ್ಲಿಸಲಾದ ಅರ್ಜಿಯಲ್ಲಿ, ಮುಂಗಾರು ಕೊರತೆಯಿಂದಾಗಿ ರಾಜ್ಯದ ಅಣೆಕಟ್ಟುಗಳಲ್ಲಿ ಸರಿಯಾದ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಕಾವೇರಿ ಜಲಾನಯನ ಪ್ರದೇಶವೂ ಸೇರಿದಂತೆ ರಾಜ್ಯದೆಲ್ಲೆಡೆ ಮಳೆ ಕೈಕೊಟ್ಟಿದೆ. ನೈಋತ್ಯ ಮಾನ್ಸೂನ್ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಇದಕ್ಕೂ ಮುನ್ನ ದೆಹಲಿಯಲ್ಲಿ ರಾಜ್ಯದ ಕೇಂದ್ರ ಸಚಿವರು, ಸರ್ವಪಕ್ಷಗಳ ಸಂಸತ್ ಸದಸ್ಯರ ಸಮ್ಮುಖದಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು.
ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು: ಕತ್ತೆಗಳ ಮೆರವಣಿಗೆ ಮಾಡಿ ಮಂಡ್ಯ ರೈತರ ಆಕ್ರೋಶ