ಕರ್ನಾಟಕ

karnataka

ETV Bharat / state

ಕಾವೇರಿ ಹೋರಾಟ: ತಮಿಳುನಾಡಿಗೆ ನೀರು ನಿಲ್ಲಿಸಲು ರಕ್ತದಲ್ಲಿ ಸಹಿ ಮಾಡಿದ ಪತ್ರ ರಾಜ್ಯಪಾಲರಿಗೆ ರವಾನೆ - ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ

Protest for Cauvery Water: ರಾಜ್ಯದಲ್ಲಿ ನಿರಂತರವಾಗಿ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ನಿಲ್ಲಿಸಲು ಹೋರಾಟಗಳು ನಡೆಯುತ್ತಿವೆ.

Protest by BJP Workers
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

By ETV Bharat Karnataka Team

Published : Sep 5, 2023, 10:30 PM IST

ಮಹಿಳೆಯರಿಂದ ಒನಕೆ ಹಿಡಿದು ಪ್ರತಿಭಟನೆ

ಮಂಡ್ಯ: ರೈತರ ವಿರೋಧದ ನಡುವೆಯೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರವಾಗಿ ಹರಿಸುತ್ತಿರುವ ನೀರು ನಿಲ್ಲಿಸಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿ ಮಂಗಳವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ರಕ್ತದಲ್ಲಿ ಸಹಿ ಮಾಡಿದ ಪತ್ರದ ಮೂಲಕ ಮನವಿ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರಕ್ತದ ಸಹಿ ಮಾಡಿದ ಮನವಿ ಪತ್ರವನ್ನು ರವಾನಿಸಿದರು.

ರಾಜ್ಯ ತೀವ್ರ ಬರಗಾಲವನ್ನು ಎದುರಿಸುತ್ತಿದ್ದು, ಜನ- ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಬೆಳೆಗಳಿಗೆ ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಆದರೂ ಸಹ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಮೈಸೂರು ಸೇರಿದಂತೆ ಹಲವು ಪ್ರದೇಶಕ್ಕೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ. ಹಾಗಾಗಿ ತಾವುಗಳು ಮಧ್ಯ ಪ್ರವೇಶಿಸಿ ತಮಿಳುನಾಡಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಲು ಕ್ರಮ ವಹಿಸಿ ರಾಜ್ಯದ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೂ ಕನ್ನಡ ಚಿತ್ರರಂಗ ಹೋರಾಟ ಮಾಡುತ್ತಿಲ್ಲ, ಕಾವೇರಿ ಕಣಿವೆಯ ಹೀರೋಗಳಾದ ದರ್ಶನ್ ಮತ್ತು ಯಶ್ ಈ ಕೂಡಲೇ ಬೀದಿಗಿಳಿದು ಹೋರಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಸಿದ್ದರಾಜು ಗೌಡ ಮಾತನಾಡಿ, ರೈತರು ಮತ್ತು ಜನರು ವಿರೋಧ ಮಾಡುತ್ತಿದ್ದರೂ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ಸರ್ಕಾರ ಸ್ಥಗಿತ ಮಾಡಿಲ್ಲ. ರಕ್ತದಲ್ಲಿ ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದೇವೆ, ಕತ್ತು ಕುಯ್ದುಕೊಂಡರೂ ಸರ್ಕಾರ ನೀರು ನಿಲ್ಲಿಸುವುದಿಲ್ಲ ಎಂದು ಕಿಡಿಕಾರಿದರು. ಕಾವೇರಿ ವಿಚಾರದಲ್ಲಿ ಅನ್ಯಾಯವಾಗಿದ್ದರೂ ಬೆಂಗಳೂರಿನ ಜನ ಏನು ಗೊತ್ತಿಲ್ಲದಂತೆ ಇದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ನೀರಿನ ಅಭಾವದ ಪರಿಸ್ಥಿತಿ ಎದುರಾಗಲಿದೆ. ಈಗಲೇ ಎಚ್ಚೆತ್ತು ಹೋರಾಟ ಮಾಡಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಶಾಸಕರು ಹೇಳಿಕೆ ನೀಡಿ ಸುಮ್ಮನಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹಾಕಿ ನೀರು ನಿಲ್ಲಿಸುವ ಕೆಲಸ ಮಾಡುತ್ತಿಲ್ಲ. ಸಂಸದರು ಒಂದು ದಿನ ಪ್ರತಿಭಟನೆ ಮಾಡಿ ಹೋದವರು ಇತ್ತ ಕಡೆ ತಲೆ ಹಾಕಿಲ್ಲ. ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗಳ ಬಳಿ ತೆರಳಿ ನೀರು ನಿಲ್ಲಿಸಲು ಒತ್ತಡ ಹಾಕಲಿ ಎಂದು ಒತ್ತಾಯಿಸಿದರು. ಡಣಾಯಕನಪುರ ರವಿಕುಮಾರ್, ಯೋಗೇಶ್, ಚಂದ್ರ, ನಿತ್ಯ ಇತರರಿದ್ದರು.

ಮಹಿಳೆಯರಿಂದ ಒನಕೆ ಹಿಡಿದು ಪ್ರತಿಭಟನೆ

ಮಹಿಳೆಯರಿಂದ ಒನಕೆ ಹಿಡಿದು ಪ್ರತಿಭಟನೆ: ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ನಡೆಸಲಾಗ್ತಿದೆ. ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ. ಆದರೂ ಅನ್ನದಾತ ಮಾತ್ರ ತನ್ನ ಹೋರಾಟವನ್ನು ಮಾಡ್ತಾನೇ ಇದ್ದಾನೆ. ಈವತ್ತೂ ಕೂಡ ವಿಭಿನ್ನವಾಗಿ ಪ್ರತಿಭಟಿಸುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದನ್ನು ವಿರೋಧಿಸಿ ಅನ್ನದಾತ ಪ್ರತಿದಿನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಬಂದಿದ್ದಾನೆ. ಮಂಗಳವಾರ ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿಯ ಮಹಿಳೆಯರು ವಿಭಿನ್ನವಾಗಿ ಒನಕೆ ಹಿಡಿದು ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ರೈತ ಸಂಘದ ಕಾರ್ಯಕರ್ತರು ಕೆಆರ್​ಎಸ್​ನಲ್ಲಿ ಆಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಮಂಡ್ಯದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಕಡೆಗೂ ಎಚ್ಚೆತ್ತ ಸಚಿವರು, ಶಾಸಕರು, ಜಿಲ್ಲಾಡಳಿತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದರು. ಬುಧವಾರದ ಕೋರ್ಟ್ ತೀರ್ಪು ರಾಜ್ಯದ ಪರ ಇರಲಿದೆ. ಇಲ್ಲವಾದರೆ ಮುಂದಿನ ಹೋರಾಟದ ರೂಪುರೇಷೆ ರೂಪಿಸುವುದಾಗಿ ತಿಳಿಸಿದ್ದಾರೆ. ಒಟ್ಟಾರೆ, ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:ಕಾವೇರಿ ವಿಚಾರದಲ್ಲಿ ಕುರುಡಾದ ರಾಜ್ಯ ಸರ್ಕಾರ: ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಕನ್ನಡಪರ ಸಂಘಟನೆ ಆಕ್ರೋಶ

ABOUT THE AUTHOR

...view details