ಮಂಡ್ಯ:ಕಾವೇರಿ ರಾಜ್ಯದ ಜೀವನದಿ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಸಂಕಷ್ಟದ ಪರಿಸ್ಥಿತಿಯಲ್ಲೂ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸುಪ್ರೀಂ ಆದೇಶದಂತೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಮಂಡ್ಯ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರ ಜಿಲ್ಲೆಯ ಹಲವೆಡೆ ಉಗ್ರ ಪ್ರತಿಭಟನೆಗಳು ನಡೆದವು. ರೈತರ ಪ್ರತಿಭಟನೆಗೆ ಸ್ವಾಮೀಜಿಗಳು ಹಾಗೂ ಚಿತ್ರ ನಟರೂ ನಿನ್ನೆ ಸಾಥ್ ನೀಡಿದ್ದರು. ಇಂದು ಮಂಡ್ಯ ಬಂದ್ಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದೆ.
ಇಂದು ಮಂಡ್ಯ ಬಂದ್:ಜಿಲ್ಲೆಯಲ್ಲಿ ನಡೆಯುತ್ತಿರುವ ಉಗ್ರ ಹೋರಾಟದ ನಡುವೆಯೂ ಇಂದು ಮಂಡ್ಯ ಬಂದ್ಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಬೆಳಿಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಬಂದ್ ಇರಲಿದೆ. ಖಾಸಗಿ ಬಸ್, ಆಟೋ ಸಂಚಾರ ಬಂದ್ ಆಗಲಿವೆ. ಅಲ್ಲದೇ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಸ್ಥಗಿತವಾಗಲಿದೆ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದಂತೆ ಎಲ್ಲವೂ ಬಂದ್ ಆಗಲಿದೆ. ಶಾಂತಿಯುತ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.
"ಒಂದು ಹನಿ ನೀರನ್ನೂ ಬಿಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬೇಕು. ಸರ್ವ ಪಕ್ಷದ ಸಭೆಯಲ್ಲಿ ಹೇಳಿದ ಮಾತನ್ನು ಸಿಎಂ ಮತ್ತೆ ಹೇಳಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ಅವರು ಬಾಯಿ ಬಿಟ್ಟಿಲ್ಲ. ನೀರಾವರಿ ಸಚಿವರು ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಕ್ಯಾಬಿನೆಟ್ವರೆಗೂ ಕಾಯಬಾರದು. ತುರ್ತಾಗಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಂಪ್ ಹೌಸ್ಗೆ ಮುತ್ತಿಗೆ:ತಮಿಳುನಾಡಿಗೆ ನೀರು ಹರಿಸುವುದಕ್ಕೆ ವಿರೋಧಿಸಿನಿನ್ನೆ(ಶುಕ್ರವಾರ) ಕನ್ನಡಪರ ಸಂಘಟನೆ ಕಾರ್ಯಕರ್ತರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದ ಬಳಿ ಇರುವ ಬೆಂಗಳೂರು ಜಲಮಂಡಳಿಯ ಪಂಪ್ ಹೌಸ್ಗೆ ಮುತ್ತಿಗೆ ಹಾಕಿದರು. ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ ಮಂಡ್ಯ ಜಿಲ್ಲೆಯ ರೈತರಿಗೆ ನೀರು ಕೊಡಿ ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಂಪ್ ಹೌಸ್ಗೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಗೆ ಸಾಥ್ ನೀಡಿದ ಸ್ವಾಮೀಜಿಗಳು: ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಸ್ವಾಮೀಜಿಗಳು ಸಾಥ್ ನೀಡಿದರು. ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಪುರುಷೋತ್ತಮ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಸೌಮ್ಯನಾಥ ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.