ನಾಲೆಗೆ ಬಿದ್ದಿರುವ ಕಾರಿನ ದೃಶ್ಯಗಳು ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿ ಬಾಲಕಿ ಸೇರಿ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಶ್ರೀರಂಗಪಟ್ಟಣ ಗಡಿಭಾಗ ಗಾಮನಹಳ್ಳಿ ಬಳಿಯ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಾಮನಹಳ್ಳಿಯಿಂದ ಬನ್ನೂರು ಮಾರ್ಗವಾಗಿ ವಿ.ಸಿ ನಾಲೆ ಏರಿ ಮೇಲೆ ಸಂಚರಿಸುತ್ತಿದ್ದಾಗ ಕಾರು ನಾಲೆಗೆ ಉರುಳಿದೆ. ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರು ನಾಲೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಮನೆಯ ಕಾರ್ಯಕ್ರಮವೊಂದಕ್ಕೆ ಬಂಧುಗಳನ್ನು ಆಹ್ವಾನಿಸಿ ಬರುವಾಗ ವಿಶ್ವೇಶ್ವರಯ್ಯ ಕಾಲುವೆಗೆ ಕಾರು ಬಿದ್ದಿದೆ. ಗಾಮನಹಳ್ಳಿಯಿಂದ ದೊಡ್ಡಮುಲಗೂಡು ಗ್ರಾಮಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ ಎಂದು ಮಂಡ್ಯ ಎಸ್ಪಿ ಎನ್ ಯತೀಶ್ ತಿಳಿಸಿದ್ದಾರೆ.
ಸ್ಥಳಕ್ಕೆ ಅರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರನ್ನು ಮಳವಳ್ಳಿ ತಾಲೂಕಿನ ಗಾಮನಹಳ್ಳಿ ಗ್ರಾಮದ ಮಹದೇವಮ್ಮ, ಬನ್ನೂರು ತಾಲೂಕಿನ ಗೊರವನಹಳ್ಳಿಯ ರೇಖಾ, ಸಂಜನಾ ಹಾಗೂ ಮಮತಾ ಎಂದು ಗುರುತಿಸಲಾಗಿದೆ. ಕಾರು ಚಾಲಕ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರಲ್ಲದೆ, ನೀರಿಗಿಳಿದು ಶವಗಳನ್ನು ಹೊರತೆಗೆದರು. ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.
ಗಾಮನಹಳ್ಳಿ ಗ್ರಾಮದ ಮಹದೇವಮ್ಮ ಭಾನುವಾರ ಆದಿಚುಂಚನಗಿರಿಯಲ್ಲಿ ಪೂಜೆ ಏರ್ಪಡಿಸಿದ್ದರು. ಅಲ್ಲದೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಅದಕ್ಕಾಗಿ ಬನ್ನೂರು ತಾಲೂಕಿನ ಅವರ ಹತ್ತಿರದ ಸಂಬಂಧಿಕರು ಒಂದು ದಿನ ಮುಂಚಿತವಾಗಿಯೇ ಬಂದಿದ್ದರು. ಪಕ್ಕದ ದೊಡ್ಡಮುಲಗೂಡು ಗ್ರಾಮದ ಸಂಬಂಧಿಕರನ್ನು ಕಾರ್ಯಕ್ರಮಕ್ಕೆ ಕರೆಯಲು ಮಮತಾ, ರೇಖಾ, ಸಂಜನಾ ಜೊತೆಗೆ ಮಹದೇವಮ್ಮ ಕಾರಿನಲ್ಲಿ ಹೊರಟಿದ್ದರು. ಗ್ರಾಮದಿಂದ ನಾಲೆ ಏರಿ ಮೇಲೆ ಹೋಗುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದಿದೆ.
ಪ್ರಾಣ ಉಳಿಸಿಕೊಂಡ ಚಾಲಕ:ಕಾರು ನಾಲೆಗೆ ಉರುಳಿ ಬೀಳುತ್ತಿದ್ದಂತೆ ಚಾಲಕ ಮನೋಜ್ ಈಜಿಕೊಂಡು ದಡ ಸೇರಿದ್ದಾರೆ. ಕಾರಿನಿಂದ ಹೊರ ಬರುವಾಗ ಮನೋಜ್ ಕಾಲು ಮುರಿದಿದೆ. ಈಜು ಬಾರದ ಮಹದೇವಮ್ಮ, ಮಮತಾ, ರೇಖಾ, ಸಂಜನಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮಂಡ್ಯ ಎಸ್ಪಿ ಎನ್. ಯತೀಶ್, ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರಲ್ಲದೆ, ಮೃತದೇಹಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಭಾನುವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಕುಟುಂಬಸ್ಥರು ಮಮತಾ, ರೇಖಾ, ಸಂಜನಾ ಶವಗಳನ್ನು ಗೊರವನಹಳ್ಳಿಗೆ ಕೊಂಡೊಯ್ದರೆ, ಗಾಮನಹಳ್ಳಿಯಲ್ಲಿಯೇ ಮಹದೇವಮ್ಮರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸರ್ಕಾರದಿಂದ ಪರಿಹಾರಧನ:ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಸಚಿವರಾದ ಎನ್. ಚಲುವರಾಯಸ್ವಾಮಿ ಹಾಗೂ ಹೆಚ್.ಸಿ. ಮಹದೇವಪ್ಪ ವೈಯುಕ್ತಿಕ ಸಹಾಯ ನೀಡಿದರಲ್ಲದೆ, ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ವಿ.ಸಿ ನಾಲೆಗೆ ಕಾರು ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ದುರಂತ ಘಟಿಸಿದೆ. ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಸಿದ್ಧತೆ ನಡೆಸಿದ್ದ ಕುಟುಂಬಸ್ಥರು ದುರಂತ ಅಂತ್ಯ ಕಂಡಿರುವುದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು. ಈ ಬಗ್ಗೆ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಕೊಚ್ಚಿಹೋಗಿದ್ದ ವ್ಯಕ್ತಿ ಶವ ಪತ್ತೆ