ಮಂಡ್ಯ:ಉಪ ಚುನಾವಣೆ ದಿನಾಂಕ ಘೋಷಣೆ ಆಗಿದ್ದು, ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೂಕ್ತ ಹುರಿಯಾಳುಗಳ ಹುಡುಕುವ ಕೆಲಸ ಮುಗಿಸಿದ್ರೆ, ಜೆಡಿಎಸ್ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇನ್ನು ಬಿಜೆಪಿಯಿಂದಲೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ.
ಮಂಡ್ಯದ ಕೆ.ಆರ್.ಪೇಟೆಯಿಂದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಕಣಕ್ಕಿಳಿಯಿವುದು ಬಹುತೇಕ ಖಚಿತ. ಬಿಜೆಪಿಯಿಂದ ಕೆ.ಸಿ. ನಾರಾಯಣಗೌಡ ಅಥವಾ ದೇವಕಿ ನಾರಾಯಣಗೌಡ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಾಗಿದೆ.
ಕೆ.ಆರ್.ಪೇಟೆಯನ್ನು ಜೆಡಿಎಸ್ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದು, ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚುತ್ತಿದೆ. ಮುಖಂಡರಾದ ಕೃಷ್ಣೇಗೌಡ, ಮನ್ ಮುಲ್ ನಿರ್ದೇಶಕ ಹೆಚ್.ಟಿ. ಮಂಜುನಾಥ್, ಬಿ.ಎಲ್ ದೇವರಾಜು, ರಾಜಾಹುಲಿ ದಿನೇಶ್ ಹೆಸರಿನ ಜೊತೆಗೆ ದೇವೇಗೌಡರ ಪುತ್ರಿ ಅನುಸೂಯ ಹೆಸರು ಕೂಡ ಕೇಳಿ ಬಂದಿದೆ.
ಬಸ್ ಕೃಷ್ಣೇಗೌಡ, ದೇವೇಗೌಡರ ಪುತ್ರಿ ಅನುಸೂಯ ಕಡೆಯಿಂದಲೂ, ಬಿ.ಎಲ್ ದೇವರಾಜು, ಮಾಜಿ ಸಚಿವ ರೇವಣ್ಣ ಕಡೆಯಿಂದಲೂ, ಹೆಚ್.ಟಿ. ಮಂಜುನಾಥ್, ಮಾಜಿ ಸಿಎಂ ಕುಮಾರಸ್ವಾಮಿ ಕಡೆಯಿಂದಲೂ, ರಾಜಾಹುಲಿ ದಿನೇಶ್ ಸ್ವಂತ ಬಲದ ಮೇಲೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಪ್ರಚಾರ ಕಾರ್ಯ ಶುರು ಮಾಡಿದ್ದಾರೆ.
ಒಂದೊಮ್ಮೆ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಪೈಪೋಟಿ ಎದುರಾದರೆ ಸ್ಥಳೀಯ ಹಾಗೂ ದೇವೇಗೌಡರ ಕುಟುಂಬ ಎರಡೂ ಕಡೆಯ ಅಭ್ಯರ್ಥಿಯಾಗಿ ಅನುಸೂಯ ಅವರಿಗೆ ಟಿಕೆಟ್ ಕೊಟ್ಟು, ಕಣಕ್ಕೆ ಇಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ದೇವೇಗೌಡರು ಸ್ಥಳೀಯ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ನೋಡಿದರೆ ಸ್ಥಳೀಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದರಲ್ಲಿ ಅನುಸೂಯ ಅವರ ಹೆಸರು ಮುಂಚೂಣಿಯಲ್ಲಿದೆ.