ಮಂಡ್ಯ: ಮಂಡ್ಯದ ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ನೀರು ಪಾಲಾಗಿದ್ದ ವ್ಯಕ್ತಿಯ ಮೃತ ದೇಹ ಇಂದು ಪತ್ತೆಯಾಗಿದೆ. ತಾಲೂಕಿನ ಶಿವಳ್ಳಿ ಗ್ರಾಮದ ಮರಿಗೌಡರ ಪುತ್ರ ಲೋಕೇಶ್ (45) ನೀರು ಪಾಲಾಗಿದ್ದರು. ಇವರ ಮೃತ ದೇಹ ದುರಂತ ನಡೆದ ಒಂದು ಕಿಲೋಮೀಟರ್ ದೂರದಲ್ಲಿರುವ ಸೇತುವೆ ಬಳಿ ದೊರೆತಿದೆ.
ಶಿವಳ್ಳಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಲೋಕೇಶ್ ಗುರುವಾರ ಕಾರ್ಯನಿಮಿತ್ತ ಪಾಂಡವಪುರಕ್ಕೆ ತೆರಳಲು ಸ್ನೇಹಿತರ ಕಾರು ತೆಗೆದುಕೊಂಡು ಹೋಗುತ್ತಿದ್ದಾಗ ತಿಬ್ಬನಹಳ್ಳಿ ಬಳಿ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ಬಿದ್ದಿತ್ತು. ಕಾರು ಚಾಲನೆ ಮಾಡುತ್ತಿದ್ದ ಲೋಕೇಶ್ ಪಾರಾಗಲು ಕಾರಿನ ಮೇಲ್ಭಾಗದಲ್ಲಿ ಕುಳಿತು ರಕ್ಷಣೆಗಾಗಿ ಕೂಗಿಕೊಂಡಿದ್ದರು. ತಕ್ಷಣ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಕಾರು ನೀರಿನಲ್ಲಿ ಮುಳುಗಿದ್ದ ಪರಿಣಾಮ ಈಜು ಬಾರದ ಲೋಕೇಶ್ ನೀರು ಪಾಲಾಗಿದ್ದರು.
ಸ್ಥಳೀಯ ಈಜುಗಾರರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಲೋಕೇಶ್ ಪತ್ತೆಯಾಗಿರಲಿಲ್ಲ. ನಾಲೆಯಲ್ಲಿ ನೀರು ಕಡಿಮೆ ಮಾಡಿ ನೀರಿನಲ್ಲಿ ಮುಳುಗಿದ್ದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಿದರೂ ಅಲ್ಲಿಯೂ ಸಹ ಮೃತದೇಹ ಇರಲಿಲ್ಲ. ನೀರಿನಲ್ಲಿ ಕೊಚ್ಚಿ ಹೋಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮೃತ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿತ್ತು. ಕತ್ತಲು ಆವರಿಸಿದ್ದರಿಂದ ಗುರುವಾರ ರಾತ್ರಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು.