ಮಂಡ್ಯ:ಬಿಜೆಪಿಯವರಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು. ಅದೇ ಕಾರಣಕ್ಕೆ ರೌಡಿ ಶೀಟರ್ಗಳನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯ ಇಬ್ಬರು ಎಂಪಿಗಳು ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅವನು ಸರ್ಚ್ ವಾರೆಂಟ್‍ನಲ್ಲಿದ್ದಾನೆ. ಇಂಥವರ ಜತೆ ಓಡಾಡಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಬಿಜೆಪಿಯವರಿಗದು ಅಂಟುರೋಗ. ಅದರಲ್ಲೂ ಬಸವರಾಜ ಬೊಮ್ಮಾಯಿಗೆ ಜಾಸ್ತಿಯಾಗಿದೆ. ಏನೇ ಹೇಳಿದದೂ ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ನಿಮ್ಮ ತಪ್ಪುಗಳನ್ನು ಹೇಳಿ. ಜನ ನಿಮಗೆ ಅಧಿಕಾರ ಕೊಟ್ಟಿಲ್ಲ. ನೀವು ಅನೈತಿಕವಾಗಿ ಬಂದಿದ್ದೀರಾ ಎಂದು ಕಿಡಿಕಾರಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಮ್ಮನ್ನು ಬಿಡಿ. ನೀವು ಏನು ಮಾಡಿದ್ದೀರಾ ಅಂತಾ ಹೇಳಿ. ರೌಡಿ ಜತೆ ವೇದಿಕೆ ಹಂಚಿಕೊಂಡಿದ್ದು ಸರಿನಾ?. ಫೈಟರ್ ರವಿ ಆಹಾ ಹೆಸರು ನೋಡು. ಫೈಟರ್ ರವಿ ಅಂತೆ. ಆರ್ಎಸ್ಎಸ್ ಹಾಗೂ ಬಿಜೆಪಿ ಇಂತಹದ್ದೇ ಕೆಲಸ ಮಾಡುತ್ತದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಇಂಥವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ. ಅಮಿತ್ ಶಾ ಏನು ಮಾವನ ಮನೆಗೆ ಹೋಗಿದ್ರಾ?. ಅವರನ್ನು ಗಡಿಪಾರು ಮಾಡಿದ್ದರು. ಈ ದೇಶದ ಗೃಹ ಸಚಿವರಿಗೆ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅಂಥವರೇ ಅಧ್ಯಕ್ಷರು, ಹೋಮ್ ಮಿನಿಸ್ಟರ್ ಆಗಿದ್ದಾರೆ. ನಲಪಾಡ್ ರೌಡಿ ಅಲ್ಲ. ಅವನೇನು ರೌಡಿ ಶೀಟರ್ ಇದ್ದಾನಾ?. ಅವನ ಮೇಲೆ ಕ್ರಿಮಿನಲ್ ಕೇಸ್ ಇದೆ ಅಷ್ಟೇ. ಅದು ಸಾಬೀತಾಗಿ ಠಾಣೆಯಲ್ಲಿ ಫೋಟೋ ಇದ್ದು ಶಿಕ್ಷೆ ಆದರೆ ಸರಿ. ಮೊಂಡುತನ, ಮಾನ ಮರ್ಯಾದೆ ಇಲ್ಲದವು ಭಂಡತನ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ರೌಡಿ ಶೀಟರ್ಗಳಿಗೆ ಬಿಜೆಪಿ ಮನ್ನಣೆ ನೀಡಲ್ಲ: ಸಿಎಂ ಬೊಮ್ಮಾಯಿ