ಕಾಂಗ್ರೆಸ್ ಚುನಾವಣಾ ಪ್ರಚಾರದ ಸಭೆ ಮಂಡ್ಯ:ಸಕ್ಕರೆ ನಾಡು ಮಂಡ್ಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಲಗ್ಗೆ ಇಟ್ಟಿದ್ದು, ಇಂದು ಮಳವಳ್ಳಿಯಲ್ಲಿ ಕೈ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಫೀಲ್ಡ್ ಗಿಳಿದು ಪ್ರಚಾರದ ಸಭೆ ಮೂಲಕ ಮತಯಾಚಿಸಿದರು.
ಮಂಡ್ಯದ ಮಳವಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣಾ ಬಹಳ ಮಹತ್ವದ ಚುನಾವಣೆ. ಗ್ಯಾರಂಟಿ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನ ರಕ್ಷಣೆ ಮಾಡದಿದ್ದರೆ ಹಕ್ಕು ಇರುತ್ತಿರಲಿಲ್ಲ. ವೋಟಿನ ಅಧಿಕಾರ ಇರುವುದರಿಂದ ಮನೆಮನೆ ಬಾಗಿಲಿಗೆ ಬರ್ತಿದ್ದಾರೆ ಎಂದರು.
ಈ ಹಕ್ಕನ್ನು ಅಂಬೇಡ್ಕರ್ ಕೊಡದಿದ್ದರೆ ಯಾರೂ ನಿಮ್ಮ ಅತ್ತಿರ ಬರ್ತಿರಲಿಲ್ಲ. ಇವತ್ತಿನ ಸರ್ಕಾರ ಸಂವಿಧಾನ ತಿರುಚುವ ಕೆಲಸ ಮಾಡ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸತ್ಯ ನುಡಿದರೆ ಜೈಲಿಗೆ ಹಾಕುವ ಕೆಲಸವನ್ನು ಈ ಸರ್ಕಾರದಲ್ಲಿ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಇನ್ನು ರಾಹುಲ್ ಗಾಂಧಿ ಅವರ ವಿರುದ್ದ ನ್ಯಾಯಾಲಯದಿಂದ ವರದಿ ಬಂದ ಬಳಿಕ ಲೋಕಸಭೆ ಸ್ಪೀಕರ್ ಅನರ್ಹ ಮಾಡಿದ್ರು. ಮನೆ ಖಾಲಿ ಮಾಡಲು ನೋಟಿಸ್ ಕೊಟ್ಟರು. ಲೈಟ್, ನೀರು ಪೈಪ್ ಲೈನ ಕಟ್ ಮಾಡಿದ್ರು. ಈಗ ತಾಯಿ ಮನೆಯಲ್ಲಿ ಇದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಅವರಿಗೆ ನೈತಿಕತೆ ಇದೆಯೇ ಎಂದು ಹೇಳಿದರು.
ಗ್ಯಾರಂಟಿ ಈಡೇರಿಸಿದ್ದರೆ ಮತ್ತೆ ಓಟ್ ಕೇಳೋಕೆ ಬರಲ್ಲ:ಡಿಕೆಶಿ ಶಪಥ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದೆ. ಜೂ 1 ರಿಂದ ಹೊಸ ಸರ್ಕಾರ ಬರುತ್ತೆ. ಅಲ್ಲಿಂದ ಕರೆಂಟ್ ಬಿಲ್ಲು ಕಟ್ಟಬೇಡಿ. ವರ್ಷಕ್ಕೆ ಪ್ರತಿ ಕುಟುಂಬಕ್ಕೆ 24 ಸಾವಿರ ಬರುತ್ತೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡ್ತಿವಿ.ಪದವಿ ಮಾಡಿರೋ ಅವರಿಗೆ ಪ್ರೋತ್ಸಾಹ ಧನ ನೀಡ್ತಿವಿ. ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡ್ತಿವಿ. ಇವೆಲ್ಲ ಘೋಷಣೆ ಮಾಡಿಲ್ಲ ಅಂದ್ರೆ ಮತ್ತೆ ಓಟ್ ಕೇಳೋಕೆ ಬರಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಪಥ ಮಾಡಿದರು.
ಬೆಲೆ ಏರಿಕೆ ಮೀತಿ ಮೀರಿದೆ. ಯುವಕರಿಗೆ ಕೆಲಸ ಕೊಡ್ತಿವಿ ಅಂತ ಬಿಜೆಪಿ ಹೇಳಿತ್ತು.ಆದರೆ ಆಮೇಲೆ ಪಕೋಡ ಮಾರಿ ಅಂತ ಹೇಳಿದ್ರು. ಪದವಿ ಓದಿ ಪಕೋಡ ಮಾರ್ತಿರಾ ಎಂದ್ರು, ನಿಮ್ಮಗೆ ಅಚ್ಚೆ ದಿನ ತರ್ತಿವಿ ಅಂದ್ರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ದುಷ್ಟ ಆಡಳಿತ ನೀಡುತ್ತಿದೆ. ಮೂರುವರೆ ವರ್ಷ ಒಂದು ಸರ್ಕಾರವನ್ನು ನೋಡಿದ್ದೇವೆ.ಇಷ್ಟು ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದಿಯೇ ಎನ್ನು ವುದನ್ನು ಅರಿತುಕೊಳ್ಳಿ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಕುಳಿತಿದ್ದ ಜಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಹಿಡಿದಿದ್ದಾರೆ.
ನರೇಂದ್ರ ಸ್ವಾಮಿ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ಇದು ನನ್ನ ಕ್ಷೇತ್ರದ ಪಕ್ಕದ ಕ್ಷೇತ್ರವಾಗಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.
ಮಂಡ್ಯದಲ್ಲಿ ಕಳೆದ ಬಾರಿ ಒಂದು ಸೀಟು ಗೆಲ್ಲೋಕೆ ಆಗಲಿಲ್ಲ. ಈ ಬಾರಿ ಅಭ್ಯರ್ಥಿ ಹಾಕಿದ್ದೇವೆ. ಹೀಗಾಗಿ ಆಶೀರ್ವಾದ ಮಾಡಿ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಮಳವಳ್ಳಿ ಜನ ಬೆಂಬಲಿಸಬೇಕು. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಬಿಜೆಪಿನ ದೂರ ಇಟ್ಟು ಕುಮಾರಸ್ವಾಮಿ ಗೆ ದರ್ಬಾರ್ ಮಾಡು ಅಂತ ಅಧಿಕಾರ ಕೊಟ್ಟೋ ಆದ್ರೆ ಅವರು ಉಳಿಸಿಕೊಳ್ಳಿಲ್ಲ. ನಿಮ್ಮ ಬದುಕಿನಲ್ಲಿ ಏನಾದ್ರೂ ಬದಲಾವಣೆ ಹಾಗಿದೆಯೇ? ಮೇ 10 ರಂದು ಮತದಾನದಲ್ಲಿ ನಿಮ್ಮ ಭವಿಷ್ಯನ ನೀವೇ ನಿರ್ಮಾಣ ಮಾಡೋವಂತಹ ದಿನವಾಗಿದೆ ಎಂದು ಮನವಿ ಮಾಡಿದರು.
ಕಾಂಗ್ರೆಸ್ ನೀಡ್ತಿರೋ ಭರವಸೆ ಬೋಗಸ್ ಅಂತ ಬಿಜೆಪಿ ಹೇಳ್ತಿದ್ದಾರೆ. ನೀವು ಕೊಟ್ಟಿರೋ ಘೋಷಣೆಗಳನ್ನು ಎಷ್ಟು ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಅನ್ನದಾನಿ ನನ್ನ ಸ್ನೇಹಿತ ಚೆನ್ನಾಗಿ ಹಾಡು ಹೇಳ್ತಾನೆ, ಅವನು ಹಾಡು ಹೇಳ್ಕೊಂಡೆ ಇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ನಿಮ್ಮ ಕೈಗೆ ನೀವೇ ಶಕ್ತಿಯನ್ನು ಕೊಡುವಂತ ದಿನ ಬಂದಿದೆ. ನಿಮಗೆ ಅಚ್ಛೇ ದಿನ ಬರುತ್ತೆ ಎಂದು ಹೇಳಿದ್ರು. ಪ್ರತಿದಿನ ಘಟಾನುಘಟಿ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಮಾಜಿ ಸಿಎಂ, ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಸಚಿವರು ಸೇರಿದಂತೆ ಹಲವರು ಸೇರುತ್ತಿದ್ದಾರೆ. ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಜೆಡಿಎಸ್ ಅವರಿಗಿಂತ ಕಡಿಮೆ ಸ್ಥಾನದಲ್ಲಿ ನಾವು ಇದ್ದೆವು, ಆದರೆ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ಹಾಕುತ್ತಾರೆ ಅಂದ್ರೆ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ರು.
ಇದನ್ನೂಓದಿ:ಸುಸ್ತಾಗಿ ಬಿದ್ದಿದ್ದಲ್ಲ, ಕೊಂಚ ಹಿಂದಕ್ಕೆ ವಾಲಿದ್ದೇನೆ.. ಆತಂಕಪಡಬೇಕಿಲ್ಲ ಎಂದ ಸಿದ್ದರಾಮಯ್ಯ