ವಿರೂಪಾಕ್ಷಪ್ಪನನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡಲ್ಲ: ಮಾಜಿ ಸಿಎಂ ಸದಾನಂದ ಗೌಡ ಸ್ಪಷ್ಟನೆ ಮಂಡ್ಯ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ರಕ್ಷಣೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮಂಡ್ಯದಲ್ಲಿ ತಿಳಿಸಿದರು. ಸರ್ಕಾರ ಮಾಡಳ್ ವಿರೂಪಾಕ್ಷಪ್ಪ ಅವರನ್ನು ರಕ್ಷಣೆ ಮಾಡುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ‘‘ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಖಂಡಿತವಾಗಿಯೂ ರಕ್ಷಣೆ ಮಾಡ್ತಿಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ, ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಲೋಕಾಯುಕ್ತವನ್ನ ಮುಚ್ಚಿ ಎಸಿಬಿ ತಂದು ರಕ್ಷಣೆ ಮಾಡಿಕೊಂಡರು. ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡಿದ್ದು ಬಿಜೆಪಿ ಸರ್ಕಾರ, ಲೋಕಾಯುಕ್ತ ಬಂದ ಮೇಲೆ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಇನ್ನೂ ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಸಂಜೆ ನಡೆಯುವ ಯಾತ್ರೆಯಲ್ಲಿ ಅವರೇ ಮುಂದಾಳತ್ವ ವಹಿಸಲಿದ್ದಾರೆ. ವಿ ಸೋಮಣ್ಣ, ನಾರಾಯಣ್ ಗೌಡ ಯಾರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ನಮ್ಮ ಜೊತೆ ಇರುವವರು ಯಾರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ಬೇರೆ ಪಕ್ಷದಿಂದಲೆ ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದರು.
ಮಂಡ್ಯ ಡೆವಲಪ್ ಆದರೆ ಇಂಡಿಯಾ ಡೆವಲಪ್: ಪ್ರಧಾನಿ ಮೋದಿ ಅವರಿಂದ ಮಂಡ್ಯ ಜಿಲ್ಲೆಗೆ ಕೊಡುಗೆ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯ ಅಭಿವೃದ್ಧಿ ಆದರೆ ಇಂಡಿಯಾ ಡೆವಲಪ್ ಆಗೋದು. ಎಲ್ಲ ಕಡೆ ಘೋಷಣೆ ಮಾಡಿದ್ದಾರೆ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು ಖಂಡಿತವಾಗಿಯೂ ಘೋಷಣೆ ಮಾಡ್ತಾರೆ ಎಂದು ತಿಳಿಸಿದರು.
ಬಿಜೆಪಿ ಜಗತ್ತು ಒಪ್ಪಿಕೊಳ್ಳುವ ಪಕ್ಷ :ಬಿಜೆಪಿಯಲ್ಲಿ ನಾಯಕರಿಲ್ಲ ಅದಕ್ಕೆ ರಾಷ್ಟ್ರ ನಾಯಕರು ಬರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಉತ್ತರಿಸಿ, ಚುನಾವಣೆ ಸಂದರ್ಭದಲ್ಲಿ ರಾಷ್ಟ್ರ ನಾಯಕರು ರಾಜ್ಯಕ್ಕೆ ಬರುವುದು ಸಹಜ. ನೆಹರು, ಇಂದಿರಾಗಾಂಧಿ ಕಾಲದಿಂದಲೂ ಬರುತ್ತಿದ್ದರು ಆಯಾ ಪಕ್ಷದ ನಾಯಕರು ಪಕ್ಷದ ಪರ ಪ್ರಚಾರಕ್ಕೆ ಆಗಮಿಸುತ್ತಾರೆ. ಇವತ್ತು ದುರ್ದೈವ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ನಾಯಕರು ಯಾರು ಇಲ್ಲ, ಜೆಡಿಎಸ್ ಪ್ರಾದೇಶಿಕ ಪಕ್ಷ, ರಾಷ್ಟ್ರದಲ್ಲಿ ಇದೀಗ ಇರುವುದು ಒಂದೇ ಪಕ್ಷ ಜಗತ್ತು ಒಪ್ಪಿಕೊಳ್ಳುವ ಪಕ್ಷ ಬಿಜೆಪಿ. ಹೀಗಾಗಿ ಅದರ ಲಾಭ ಪಡೆದುಕೊಳ್ಳುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಆಧಾರರಹಿತ ಸುದ್ದಿ ಪ್ರಕಟಿಸದಂತೆ ನಿರ್ಬಂಧ:ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್)ಗೆ ರಾಸಾಯನಿಕ ಪೂರೆಕೆಗೆ ಗುತ್ತಿಗೆ ನೀಡುವ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಅವರ ಪುತ್ರ ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಎಂ.ವಿ.ಪ್ರಶಾಂತ್ ಕುಮಾರ್ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.
ಇದನ್ನೂ ಓದಿ:ಮಾಡಾಳ್ ವಿರುಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು