ಮಂಡ್ಯ:ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿರುವ ಬಿಜೆಪಿ, ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿಂದು ರಣಕಹಳೆ ಮೊಳಗಿಸಿತು. ಹಳೆ ಮೈಸೂರು ಭಾಗದಲ್ಲಿ ಗಣನೀಯವಾಗಿ ಸಾಧನೆ ಮಾಡಬೇಕೆಂದು ಸಂಕಲ್ಪ ತೊಟ್ಟಿರುವ ಪಕ್ಷ, ಮಂಡ್ಯ ಜಿಲ್ಲೆಯಲ್ಲೇ ನಾಲ್ಕೈದು ಸ್ಥಾನ ಗೆಲ್ಲಲು ತಯಾರಿ ನಡೆಸುತ್ತಿದೆ. ಈ ಗುರಿಯೊಂದಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕ ನಾಯಕರು ಫೀಲ್ಡ್ಗೆ ಇಳಿದಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ಮಂಡ್ಯ ಜಿಲ್ಲೆಯಲ್ಲಿ ನಾಲ್ಕೈದು ಸ್ಥಾನ ಗೆಲ್ಲಬೇಕು. ಆಗ ಮಾತ್ರ ನಾನು ಜಿಲ್ಲೆಯಲ್ಲಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತೆ ಅಂತ ಭಾವನಾತ್ಮಕ ದಾಳ ಉರುಳಿಸಿದ್ರು.
ಬಸವರಾಜ ಬೊಮ್ಮಾಯಿ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಕೊಂಡಾಡಿದರು. ಉಗ್ರ ಶರೀನ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿಎಂ, ಕುಕ್ಕರ್ನಲ್ಲಿ ಅಕ್ಕಿ ಬೇಯಿಸೋದು ಗೊತ್ತಿತ್ತು. ಬಾಂಬ್ ಬೇಯಿಸುವುದನ್ನು ಕೇಳಿರಲಿಲ್ಲ. ಭಯೋತ್ಪಾದಕನ ಬಗ್ಗೆ ಅನುಕಂಪದ ಮಾತನಾಡುವ ಮೂಲಕ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದರು.