ರಾಜ್ಯ ಮತ್ತು ದೇಶದಲ್ಲಿ ಮತ್ತೊಮ್ಮೆ ಕಮಲ ಅರಳುತ್ತದೆ : ಸಚಿವ ಆರ್ ಅಶೋಕ್ ಮಂಡ್ಯ:ಮಂಡ್ಯದಲ್ಲಿ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಬೇಸತ್ತಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮತ್ತೆ ಕಮಲ ಅರಳುತ್ತದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ನನಗೇನು ಹೊಸದಲ್ಲ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಚುನಾವಣೆಗಾಗಿ ರಾಜಕೀಯ ಬದಲಾವಣೆ ತರುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಇನ್ನು, ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳನ್ನು ನೋಡಿ ಜನರು ಬೇಸರಗೊಂಡಿದ್ದಾರೆ. ಶುಗರ್ ಫ್ಯಾಕ್ಟರಿಯನ್ನು ನಮ್ಮ ಸರ್ಕಾರ ಬಂದ ಮೇಲೆ ತೆರೆದಿದ್ದೇವೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕು. ಈಗಾಗಲೇ ಮಂಡ್ಯದಲ್ಲಿ ನಾವು ಖಾತೆ ತೆರೆದಿದ್ದೇವೆ. ಈ ಖಾತೆಗೆ ಇನ್ನಷ್ಟು ಸೇರ್ಪಡೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಗೆಲ್ಲಲು ಒತ್ತು :ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನನ್ನು ಗೆಲ್ಲುವ ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಉದ್ದೇಶಕ್ಕೆ ಪೂರಕವಾಗಿ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡೋ ಉದ್ದೇಶ ಇಟ್ಟುಕೊಳ್ಳಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಗೆಲ್ಲಿಸೋ ಜವಾಬ್ದಾರಿಯನ್ನು ಪಕ್ಷ ನನಗೆ ಕೊಟ್ಟಿದೆ. ಆ ದೃಷ್ಟಿಯಿಂದಲೇ ನಾನು ಮಂಡ್ಯಕ್ಕೆ ಬಂದಿದ್ಧೇನೆ ಎಂದು ತಿಳಿಸಿದರು.
ಜಿಲ್ಲೆಯ ಜನರು ಎರಡು ಪಕ್ಷಗಳನ್ನು ನೋಡಿ ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆ ಬೇಕಾದರೆ ಒಳ್ಳೆಯ ಅಭ್ಯರ್ಥಿಗಳು ಬೇಕು. ಒಳ್ಳೆಯ ಅಭ್ಯರ್ಥಿಗಳನ್ನು ಹಾಕುತ್ತೇವೆ. ಈ ಬಗ್ಗೆ ಹಲವು ಮುಖಂಡರ ಜೊತೆ ಚರ್ಚೆಯಾಗಿದೆ. ಹೊಸ ಮುಖಗಳನ್ನು ತರಲು ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಭೇಟಿ ಮಾಡಿದ್ದೇವೆ ಎಂದು ಹೇಳಿದರು.
ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ್ನು ತೊಳೆಯುತ್ತೇವೆ : ಇನ್ನು, ಕೆಪಿಸಿಸಿ ಅಶಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಿಧಾನಸೌಧ ತೊಳೆಯಬೇಕು ಎಂದು ಹೇಳಿದ್ದಾರೆ. ಹಾಗೆಯೇ ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಮಂಡ್ಯದಲ್ಲಿ ತೊಳೆಯುತ್ತೇವೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಎರಡೂ ಪಕ್ಷಗಳು ಏನೇ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಳೆದ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿ ನೆಲಕಚ್ಚಿದೆ. ಎಂಪಿ ಚುನಾವಣೆಯು ಎರಡೂ ಪಕ್ಷಕ್ಕೆ ಪಾಠವಾಗಿದೆ. ಮಂಡ್ಯದಲ್ಲಿ ಹಲವಾರು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆದಿದೆ. ಎರಡೂ ಪಕ್ಷಕ್ಕೆ ಸರಿ ಸಮನಾಗಿ ಅಭ್ಯರ್ಥಿಗಳ ಹಾಕಿ ಗೆಲುವು ಸಾಧಿಸುವುದಾಗಿ ಸಚಿವರು ಹೇಳಿದರು.
ಮಾರ್ಚ್ನಲ್ಲಿ ಮಂಡ್ಯಕ್ಕೆ ಮೋದಿ :ಇನ್ನು, ಬಿಜೆಪಿಗೆ ಹಳೇ ಮೈಸೂರು ಭಾಗವೇ ಮೊದಲ ಗುರಿಯಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಬಳಿಕ ಮಂಡ್ಯಕ್ಕೆ ಮೋದಿ ಆಗಮಿಸುತ್ತಿದ್ದು, ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಮಂಡ್ಯಕ್ಕೆ ಅವರು ಆಗಮಿಸಲಿದ್ದಾರೆ. ಬೆಂಗಳೂರು -ಮೈಸೂರು ಹೆದ್ದಾರಿ ಉದ್ಘಾಟನೆಗೆ ಮೋದಿ ಬರಲಿದ್ದಾರೆ. ಈ ಸಂಬಂಧ ಮಂಡ್ಯದಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಸಚಿವರಿಗೆ ಅದ್ಧೂರಿ ಸ್ವಾಗತ: ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬಳಿಕ ಮಂಡ್ಯಕ್ಕೆ ಮೊದಲ ಭೇಟಿ ಕೊಟ್ಟ ಸಚಿವ ಆರ್ ಅಶೋಕ್ ಅವರನ್ನು ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಹಾಗೂ ಅರವಿಂದ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಈ ವೇಳೆ ಪಟಾಕಿ ಸಿಡಿಸಿ ಹಾರ ಹಾಕಿ ಸ್ವಾಗತ ಮಾಡಲಾಯಿತು. ಮದ್ದೂರಿನಲ್ಲಿಯೂ ಬೃಹತ್ ಹಾರ ಹಾಕಿ ಬಿಜೆಪಿ ನಾಯಕರು ಸ್ವಾಗತ ಕೋರಲಾಯಿತು.
ಇದನ್ನೂ ಓದಿ :ರಾಜಕೀಯ ಮಾಡುವುದಿದ್ರೆ ಮಂಡ್ಯದಲ್ಲೆ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್