ಮಂಡ್ಯ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಹಾಗೂ ಜನಪರ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‌ಗೆ ಸಕ್ಕರೆ ನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ನಗರದ ಅಂಗಡಿ-ಮುಂಗಟ್ಟಿಗಳಿಗೆ ತೆರಳಿ ಗುಲಾಬಿ ಹೂ ಹಾಗೂ ಬಾದಾಮಿ ಹಾಲು ನೀಡಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಮಂಡ್ಯದಲ್ಲಿ ರೈತ ಮುಂಖಂಡರು ಸೇರಿದಂತೆ ವಿವಿಧ ಸಂಘಟನೆಯ ಪ್ರತಿಭಟನಾಕಾರರು ಜಿಲ್ಲೆಯ ಗೆಜ್ಜಲಗೆರೆ, ಪಾಂಡವಪುರ, ಕೆಆರ್‌ಪೇಟೆ, ಮಳವಳ್ಳಿ ಸೇರಿ ಹಲವೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಂಧಿ ಫೋಟೋ ಇಟ್ಟು ಕೆಲ ಸಮಯ ಪ್ರತಿಭಟಿಸಿದರು. ಇವೆಲ್ಲದರ ನಡುವೆ ಪ್ರತಿಭಟನಾಕಾರರು ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು.
ಆದ್ರೆ, ಬಂದ್‌ಗೆ ಸಕಾರಾತ್ಮಕ ಬೆಂಬಲ ನೀಡದೆ ಎಂದಿನಂತೆ ಬಸ್,ಆಟೋ, ಟ್ಯಾಕ್ಸಿ ಸಂಚಾರವೂ ಸರಾಗವಾಗಿತ್ತು. ಹೋಟೆಲ್, ಅಂಗಡಿಗಳ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ರೆ, ಶಾಲಾ-ಕಾಲೇಜುಗಳು ಕೂಡ ಕಾರ್ಯ ಆರಂಭಿಸಿದವು.