ಮಂಡ್ಯ:ಚುನಾವಣೆ ಅಂದ್ರೆ ಹಣದ ಹೊಳೆ. ಹೀಗಾಗಿ ಹಣದ ಹಿಂದೆ ಬೀಳೋದು ಸಾಮಾನ್ಯ. ಆದರೆ ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಹಣ ಕೇಳ್ತಾರೆ ಅಂದ್ರೆ ನೀವು ನಂಬ್ತಿರಾ?. ನಂಬಲೇಬೇಕು.
ಹೌದು, ಜಿ. ಮಾದೇಗೌಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಹುಡುಗರಿಗೆ ಹಣ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರ ಮೊಬೈಲ್‌ಗೆ ಕರೆ ಮಾಡಿಸಿ ಕಾವೇರಿ ಹೋರಾಟಗಾರ ಜಿ.ಮಾದೇಗೌಡರು ಕಾರ್ಯಕರ್ತರಿಗೆ ಹಣ ನೀಡುವಂತೆ ಕೇಳಿದ್ದಾರೆ.
ಅದು ನನ್ನದೇ ವಾಯ್ಸ್ ಎಂದ ಮಾದೇಗೌಡ ಆಡಿಯೋ ತಮ್ಮದೆಂದು ಒಪ್ಪಿಕೊಂಡ ಮಾದೇಗೌಡ್ರು:
ಆಡಿಯೋ ವೈರಲ್ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಜಿ. ಮಾದೇಗೌಡ, ಅದು ನನ್ನದೇ ಧ್ವನಿ. ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೀನಿ. ಕ್ಯಾನ್ವಾಸ್‌ಗೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ. ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ. ನಂಗೆ ಅದರಲ್ಲೇನು ತಪ್ಪು ಕಾಣಿಸ್ತಾ ಇಲ್ಲ ಎಂದು ಹಣದ ಬೇಡಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂಡಿಯಾದಲ್ಲಿ ದುಡ್ಡು ಖರ್ಚು ಮಾಡದೇ ಯಾರಾದ್ರೂ ಎಲೆಕ್ಷನ್ ಮಾಡೋರು ಇದಾರಾ. ಪ್ರಧಾನಿ ಮೋದಿಯಿಂದ ಹಿಡಿದು ದುಡ್ ಖರ್ಚ್ ಮಾಡದೇ ಇರೋರು ಯಾರಾದರೂ ಇದಾರಾ ಎಂದು ಮರು ಪ್ರಶ್ನೆ ಹಾಕಿದರು ಮಾದೇಗೌಡ. ಮೊನ್ನೆ ಹುಡುಗರು ಬಂದು ನನ್ ಕೇಳ್ತಾರೆ. ನನ್ ಹತ್ರ ದುಡ್ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ. ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ, ನನ್ ಹತ್ರ ದುಡ್ಡಿಲ್ಲ. ಹಾಗಾಗಿ ಮಿನಿಸ್ಟರ್ಗೆ ಕೇಳ್ದೆ ಎಂದರು. ನಾನು ಲಂಚ ಕೇಳಿಲ್ಲ. ನನ್ ಹತ್ರ ಬಂದ ಹುಡುಗರಿಗೆ ಕೇಳ್ದೆ. ನನ್ ಹೆಸರು ಕೆಡಿಸೋಕೆ ಇದರಲ್ಲಿ ಕೆಟ್ ಹೋದ್ರೆ ಸಂತೋಷ. ನಾನು ಹೆಸರಿಗಾಗಿ ಹೋರಾಟ ಮಾಡ್ತಾ ಇಲ್ಲ. ಸಿಎಂ ಆಗಬೇಕಾ, ಮಿನಿಸ್ಟರ್ ಆಗಬೇಕಾ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ಧ ಅಂತಾ ಬಹಿರಂಗವಾಗಿಯೇ ಹೇಳಿದ್ದು ವಿಪರ್ಯಾಸವೇ ಸರಿ.