ಮಂಡ್ಯ:ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಥಳಿಸಿ, ನಂತರ ಪೊಲೀಸ್ ಠಾಣೆಗೆ ದೂರು ಕೊಡಲು ಹೊಗಿ ಪೊಲೀಸರ ಅತಿಥಿಗಳಾದ ಘಟನೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.
ಹಲ್ಲೆ ಮಾಡಿ ದೂರು ಕೊಡಲು ಹೋದರು; ಸಾಕ್ಷಿ ಸಮೇತ ಪೊಲೀಸರ ಅತಿಥಿಯಾದರು..!
ಯುವಕನನ್ನು ಥಳಿಸಿದ್ದಷ್ಟೇ ಅಲ್ಲದೇ ಈತ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲು ಹೋಗಿದ್ದ ಯುವಕರನ್ನು ಬಂಧಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿದ್ದು ಇಬ್ಬರು ಪೊಲೀಸರ ಅತಿಥಿಯಾಗಿದ್ದು ಒಬ್ಬ ಪರಾರಿಯಾಗಿದ್ದಾನೆ.
ಗೋವಿಂದ ರಾಜು, ಮಹೇಶ ಮತ್ತು ಕಾಂತರಾಜು ಎಂಬುವವರು ಶೇಖರ್ ಎಂಬಾತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಒಬ್ಬನೇ ನಮ್ಮ ಮೂವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮೂವರು ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಿದ್ದರು. ಆದರೆ, ಈ ವೇಳೆ ಶೇಖರ್ ವಿಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಕ್ಷಿಯಾಗಿ ವಿಡಿಯೋ ನೋಡಿದ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ದಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.