ಮಂಡ್ಯ: ಮನ್ಮುಲ್ ನೀರು ಮಿಶ್ರಿತ ಹಾಲು ಮಾರಾಟ ಪ್ರಕರಣ ಬಯಲಾಗಿ ತನಿಖೆ ಹಂತದಲ್ಲಿರುವಾಗಲೇ ಹಾಲಿನ ಗುಣಮಟ್ಟ ಪರೀಕ್ಷಿಸುವ ಲ್ಯಾಕ್ಟೋ ಮೀಟರ್ನಲ್ಲಿ ವ್ಯತ್ಯಾಸ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ನಾಗಮಂಗಲ ತಾಲೂಕಿನ ಕರಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಹಾಲನ್ನು ಕಳೆದೊಂದು ವಾರದಿಂದ ಕಳಪೆ ಮಟ್ಟದ ಹಾಲು ಎಂದು ತಿರಸ್ಕರಿಸುತ್ತಿರುವುದನ್ನು ಖಂಡಿಸಿ ಹಾಲಿನ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿನಿತ್ಯ 3 ಸಾವಿರಕ್ಕೂ ಅಧಿಕ ಲೀಟರ್ ಹಾಲು ಪೂರೈಕೆ..
ಕರಡಹಳ್ಳಿ ಗ್ರಾಮದ ಬಿಎಂಸಿ ಕೇಂದ್ರದಿಂದ ಪ್ರತಿನಿತ್ಯ ಕನಿಷ್ಠ 3 ಸಾವಿರಕ್ಕೂ ಅಧಿಕ ಲೀಟರ್ ಹಾಲು ಮಂಡ್ಯ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಟ್ಯಾಂಕರ್‌ಗೆ ಹಾಲು ತುಂಬಿಸಿಕೊಳ್ಳುವ ಸಮಯದಲ್ಲಿ ಗುಣಮಟ್ಟ ಪರಿಶೀಲಿಸುವ ಲಾರಿ ಸಿಬ್ಬಂದಿ ತಮ್ಮ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಪರೀಕ್ಷಿಸಿ ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸುತ್ತಿದ್ದಾರೆ ಎಂಬುದು ಮಾರಾಟಗಾರರ ಅಳಲಾಗಿದೆ.
ಕರಡಹಳ್ಳಿ, ಬಿಎಂಸಿ ಕೇಂದ್ರದವರು ಜಿಲ್ಲಾ ಹಾಲು ಒಕ್ಕೂಟದ ನಾಗಮಂಗಲ ಉಪ ಕೇಂದ್ರದಲ್ಲಿಯೇ ಖರೀದಿಸಿರುವ ಲ್ಯಾಕ್ಟೋಮಿಟರ್‌ನಲ್ಲಿ ಹಾಲಿನ ಗುಣಮಟ್ಟ 28.5 ಡಿಗ್ರಿ ತೋರಿಸಿದರೆ, ಲಾರಿ ಚಾಲಕನ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಹಾಲಿನ ಗುಣಮಟ್ಟ 27 ಡಿಗ್ರಿ ಬರುತ್ತಿದೆ. ಈ ದಂಧೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.