ಮಂಡ್ಯ: ಬಡವರು ಹಸಿವಿನಿಂದ ನರಳಬಾರದೆಂಬ ಉದ್ದೇಶದಿಂದ ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತದೆ. ಆದ್ರೆ ಬಡವರಿಗೆ ಸೇರಬೇಕಿರುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಅದ್ರಲ್ಲೂ ಅನ್ನ ಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ಹೊರ ದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ಆರೋಪ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ತಾಲೂಕಿನ ಗೊರವಾಲೆ ಗ್ರಾಮದ ಜೈ ಮಾರುತಿ ಅಕ್ಕಿ ಗಿರಣಿಯಲ್ಲಿ 250 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಎರಡು ಕ್ಯಾಂಟರ್ ಮೂಲಕ ಸಾಗಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ. ಗಾಳಿ ನೇತೃತ್ವದಲ್ಲಿ ಶಿವಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಚಾಲಕರಿಬ್ಬರು ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾರೆ. ಎರಡು ಕ್ಯಾಂಟರ್‌ನಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಲಾಗಿದ್ದು, ಇದು ಅನ್ನಭಾಗ್ಯದ ಅಕ್ಕಿ ಎಂಬುದು ಖಚಿತವಾಗಿದೆ. ರೈಸ್ ಮಿಲ್ ಮಾಲೀಕರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.