ಮಂಡ್ಯ: ಶಾಸಕಿ ಅನಿತಾ ಕುಮಾರಸ್ವಾಮಿ ಅಖಾಡಕ್ಕಿಳಿದು ಪುತ್ರನ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮುಂದಾಗಿದ್ದಾರೆ.
ಅನಿತಾ ಕುಮಾರಸ್ವಾಮಿಯವರು ಅತೃಪ್ತ ಸ್ವಪಕ್ಷೀಯ ಶಾಸಕನ ಮನವೊಲಿಕೆಗೆ ಮುಂದಾಗಿದ್ದು, ಮೈಸೂರಿನ ರವೀಂದ್ರ ಶ್ರೀಕಂಠಯ್ಯ ನಿವಾಸಕ್ಕೆ ಪುತ್ರ ನಿಖಿಲ್, ಜೆಡಿಎಸ್ ಮಂಡ್ಯ ಜಿಲ್ಲಾಧ್ಯಕ್ಷ ಡಿ. ರಮೇಶ್ ಜೊತೆ ತೆರಳಿ ಮಾತುಕತೆ ನಡೆಸಿದರು. ಬೆಳಗ್ಗೆ ಭೇಟಿ ನೀಡಿ, ಸುಮಾರು ಎರಡು ಗಂಟೆ ಚರ್ಚೆ ಮಾಡಿ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ.
ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದು, ಅನುದಾನ ಹಂಚಿಕೆ ತಾರತಮ್ಯ, ಕೆ ಆರ್ ಎಸ್ KRS ನಿವಾಸಿಗಳಿಗೆ ಹಕ್ಕು ಪತ್ರ ನೀಡದ ಕುರಿತು ಅಸಮಾಧಾನಗೊಂಡಿದ್ದರು. ಹೀಗಾಗಿ ಕಳೆದ ವಾರ ನಡೆದ ಸಿಎಂ ಕಾರ್ಯಕ್ರಮಕ್ಕೆ ಗೈರುಹಾಜರಾಗಿ ಅಸಮಾಧಾನ ಹೊರ ಹಾಕಿದ್ದರು.
ಜೆಡಿಎಸ್ ನಾಯಕರಿಂದಲೂ ಅಂತರ ಕಾಯ್ದುಕೊಂಡಿದ್ದ ರವೀಂದ್ರ ಶ್ರೀಕಂಠಯ್ಯರ ನಡೆಯಿಂದ ಪಕ್ಷಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸ್ವಪಕ್ಷೀಯ ಶಾಸಕನ ಅತೃಪ್ತಿ ಶಮನಕ್ಕೆ ಅನಿತಾ ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ.
ಜೊತೆಗೆ ರವೀಂದ್ರ ಶ್ರೀಕಂಠಯ್ಯ ಮನೆಯಲ್ಲೇ ಉಪಹಾರ ಸೇವನೆ ಮಾಡಿ, ಚುನಾವಣೆ ಕುರಿತು ಚರ್ಚೆ ನಡೆಸಿದರು.