10 ರಾಗಿ ಮುದ್ದೆ ನುಂಗಿದ ವೃದ್ಧ ಮಂಡ್ಯ: ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿರುವ ಸಾವಯವ ಸಿರಿಧಾನ್ಯ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಾಗಿ ಮುದ್ದೆ ನಾಟಿಕೋಳಿ ಸಾರು ಊಟದ ಸ್ಪರ್ಧೆ ವೃದ್ಧರೋರ್ವರು ಬರೋಬ್ಬರಿ 10 ಮುದ್ದೆ ತಿನ್ನುವ ಮೂಲಕ ಎಲ್ಲರ ಗಮನ ಸೆಳೆದರು. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ 62 ವರ್ಷದ ಈರೇಗೌಡ 10 ಮುದ್ದೆಗಳನ್ನು (2 ಕೆ.ಜಿ. 716 ಗ್ರಾಂ) ನುಂಗಿ ಪ್ರಥಮ ಸ್ಥಾನ ಪಡೆದರು. ದಿಲೀಪ್ ಎಂಬುವವರು 6 ಮುದ್ದೆ (1 ಕೆಜಿ 682 ಗ್ರಾಂ) ತಿಂದು ದ್ವಿತೀಯ ಸ್ಥಾನ ಪಡೆದರೆ, ರವೀಂದ್ರ ಎಂಬವರು 5.5 ಮುದ್ದೆ ತಿಂದು (1 ಕೆಜಿ 544 ಗ್ರಾಂ) ತೃತೀಯ ಸ್ಥಾನ ಪಡೆದರು.
ರಾಗಿ ಮುದ್ದೆ ನಾಟಿಕೋಳಿ ಸಾರು ಊಟದ ಸ್ಪರ್ಧೆಗೆ 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಯಾರು ಅತಿ ಹೆಚ್ಚು ಮುದ್ದೆ ಮತ್ತು ಚಿಕನ್ ಪೀಸ್ಗಳನ್ನು ತಿನ್ನುತ್ತಾರೆಯೋ ಅವರು ವಿಜಯಶಾಲಿಗಳು ಎಂದು ಘೋಷಿಸಲಾಯಿತು. ತೀರ್ಪುಗಾರರು ಊಟಕ್ಕೆ ಚಾಲನೆ ಕೊಟ್ಟ ತಕ್ಷಣವೇ ಸ್ಪರ್ಧಿಗಳು ನಾಮುಂದು ತಾಮುಂದು ಎಂದು ಮುದ್ದೆ ನುಂಗಿದರು. ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು. ಸ್ವತಃ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಐದೂವರೆ ರಾಗಿ ಮುದ್ದೆ ನುಂಗಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.
ಪ್ರಥಮ ಸ್ಥಾನ ಪಡೆದ ಈರೇಗೌಡ ಮಾತನಾಡಿ, "ನನಗೆ 62 ವರ್ಷ ವಯಸ್ಸಾಗಿದೆ ಕಳೆದ 9 ವರ್ಷಗಳಿಂದ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ಇದು ಸೇರಿ ಒಟ್ಟು 14 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ. ಇಂದು 10 ಮುದ್ದೆ ತಿಂದೆ. ರಾಜ್ಯ ಹಲವೆಡೆ ನಡೆದಿದ್ದ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ" ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ, "ಸಿರಿಧಾನ್ಯ ಆಸ್ವಾದಿಸೋಣ, ಸಾವಯವದೆಡೆ ಸಾಗೋಣ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನಲ್ಲಿ ಜ.5ನೇ ತಾರೀಖಿನಿಂದ 7ನೇ ತಾರೀಖಿನ ವರೆಗೂ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜನೆ ಮಾಡುವ ಮೂಲಕ ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಹಿನ್ನೆಲೆ ಮಂಡ್ಯದಲ್ಲಿ ಸಿರಿಧಾನ್ಯದ ಹಬ್ಬವನ್ನು ಮಂಡ್ಯ ಜಿಲ್ಲೆ ಎತ್ತಕಡೆಗೆ, ಸಾವಯವ ಸಿರಿಧಾನ್ಯದೆಡೆಗೆ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ. ರಾಗಿ ಮುದ್ದೆ ನಾಟಿಕೋಳಿ ಸಾರು ಊಟದ ಸ್ಪರ್ಧೆಯಲ್ಲಿ 10 ಜನ ಭಾಗವಹಿಸಿದ್ದರು, ನಾನು ಕೂಡ ಮುದ್ದೆ ಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬಾಲರಾಮನ ವಿಗ್ರಹ ಶಿಲೆ, ಶಿಲ್ಪಿ ನಮ್ಮ ಕರುನಾಡಿನ ಹೆಮ್ಮೆ: ಸುಬುಧೇಂದ್ರ ಶ್ರೀ