ಮಂಡ್ಯ:ಇಲ್ಲಿನ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ 2,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ದೀಪ ಬೆಳಗುವ ಮೂಲಕ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿ ವಹಿಸಿದ್ದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯ ಡೈರಿಗೆ ಈಗಾಗಲೇ ಹಲವಾರು ಪ್ರಶಂಸೆಗಳು ದೊರೆತಿವೆ. ಈಗ ಮೆಗಾ ಡೈರಿ ಲೋಕಾರ್ಪಣೆಗೊಂಡಿದೆ. ಈ ಡೈರಿ 10 ಲಕ್ಷ ಲೀ. ಹಾಲಿನ ಸಂಗ್ರಹಣೆ ಸಾಮರ್ಥ್ಯ ಹೊಂದಿರುವುದು ಇಲ್ಲಿನ ರೈತರಿಗೆ ಇನ್ನೂ ಅನುಕೂಲವಾಗಲಿದೆ. ಅನಾರೋಗ್ಯದ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡರು ಮೆಗಾ ಡೈರಿ ಉದ್ಘಾಟನೆಗೆ ಬಂದಿದ್ದಾರೆ. ಬೊಮ್ಮಾಯಿ ಅವರು ಹೆಚ್ಚಿನ ಆಸಕ್ತಿವಹಿಸಿ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ದೇವೇಗೌಡರ ಕಾಲಿಗೆ ನಮಸ್ಕರಿಸಿದ ಬೊಮ್ಮಾಯಿ :ಮೆಗಾ ಡೈರಿ ಉದ್ಘಾಟನೆ ಸಮಾರಂಭ ಕಾರ್ಯಕ್ರಮಕ್ಕೆ ವೇದಿಕೆಗೆ ಆಗಮಿಸುತ್ತಿದ್ದಂತೆ ದೇವೇಗೌಡರ ಕಾಲಿಗೆ ಬಸವರಾಜ ಬೊಮ್ಮಾಯಿ ನಮಸ್ಕರಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಯಶಸ್ಸು ಕಂಡಿದೆ. ಮನೆಯಲ್ಲಿ ಹಾಲು ಕರೆದು ಹಾಕುವ ಮಹಿಳೆಯರಿಗೆ ಧನ್ಯವಾದಗಳು. ಹಾಲಿಗೆ 5 ರೂ ಪ್ರೊತ್ಸಾಹ ಧನ ಕೊಡ್ತಿದ್ದೇವೆ. ಗೆಜ್ಜಲಗೆರೆಯಲ್ಲಿ 10 ಲಕ್ಷ ಸಾಮರ್ಥ್ಯ ಹೊಂದಿರುವ ಮೆಗಾ ಡೈರಿ ಉದ್ಘಾಟನೆ ಮಾಡಲಾಗಿದೆ. ನರೇಂದ್ರ ಮೋದಿ ಅವರು ಸಹಕಾರ ಮಾಡಿ ದೇಶದಲ್ಲಿ ಶಕ್ತಿ ತುಂಬಿದ್ದಾರೆ. ಬೆಂಗಳೂರಿನ ಮೆಗಾ ಡೈರಿ ಸ್ಥಾಪನೆಗೆ ದೇವೇಗೌಡರೇ ಕಾರಣ. ಬೆಂಗಳೂರಿನ ಡೈರಿ ನಿರ್ಮಾಣದಲ್ಲಿ ದೇವೇಗೌಡರದ್ದು ಮಹತ್ವದ ಪಾತ್ರವಿದೆ ಎಂದು ನೆನೆದರು.
ರೈತರಿಗೆ ಇನ್ನಷ್ಟು ಅನುಕೂಲ:ಆತ್ಮ ನಿರ್ಭರ್ ಯೋಜನೆ ಅಡಿ ರೈತರಿಗೆ ಇನ್ನಷ್ಟೂ ಯೋಜನೆಗಳನ್ನು ಮಾಡುತ್ತೇವೆ. ಈಗಾಗಲೇ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ರೈತರಿಗೆ ಇನ್ನಷ್ಟೂ ನೀರಾವರಿ ಮತ್ತು ಕೈಗಾರಿಕೆಗಳ ಅವಶ್ಯಕತೆ ಇದೆ ಅದರತ್ತ ಬಿಜೆಪಿ ಶ್ರಮಿಸುತ್ತದೆ. ಮೈಶುಗರ್ ಪ್ರಾರಂಭವಾಗಿದೆ, ಮುಂದಿನ ವರ್ಷ ಎಥನಾಲ್ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.