ಮಂಡ್ಯ:ಜಿಲ್ಲೆಯ ಪ್ರಮುಖ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ. ಭೂ ವೈಕುಂಠ, ದಕ್ಷಿಣ ಬದರಿ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ದರ್ಶನಕ್ಕೆ ಪ್ರತಿನಿತ್ಯ ಅಪಾರ ಭಕ್ತರು ಬರುತ್ತಾರೆ. ಇದೀಗ ದೇವಸ್ಥಾನಕ್ಕೆ ಸೇರಿದ್ದ 14 ಎಕರೆ ಜಮೀನನ್ನು ಅಕ್ರಮವಾಗಿ ಕೆಲವು ಖಾಸಗಿ ವ್ಯಕ್ತಿಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಬಸರಾಳು ಗ್ರಾಮದ ರವಿಕುಮಾರ್ ಎಂಬವರು ಕೆಲವು ದಾಖಲೆಗಳಸಹಿತ ದೂರು ಸಲ್ಲಿಸಿದ್ದಾರೆ. ಮೈಸೂರು ರಾಜವಂಶಸ್ಥರು ಚೆಲುವನಾರಾಯಣಸ್ವಾಮಿಗೆ ದೇಣಿಗೆ ರೂಪದಲ್ಲಿ ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿ 20 ಎಕರೆ ಜಮೀನು ನೀಡಿದ್ದರು. ಈ ಜಮೀನು ಇದೀಗ ಕೋಟ್ಯಂತರ ರೂ. ಬೆಲೆಬಾಳುತ್ತಿದ್ದು, 20 ಎಕರೆ ಪೈಕಿ 14 ಎಕರೆ ಜಮೀನನ್ನು ನಾಲ್ವರ ಹೆಸರಿಗೆ ಖಾತೆ ಮಾಡಲಾಗಿದ್ದು, ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಈ ಅಕ್ರಮದಲ್ಲಿ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ. ಈ ದೂರಿನನ್ವಯ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಈ ಬಗ್ಗೆ ವರದಿ ನೀಡುವಂತೆ ಉಪವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ಸೂಚಿಸಿದ್ದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ಜಮೀನು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಈ ಭೂಮಿ ಮೂಲತಃ ಮೇಲುಕೋಟೆ ಚೆಲವನಾರಾಯಣಸ್ವಾಮಿ ದೇವಾಲಯಕ್ಕೆ ದೇಣಿಗೆ ರೂಪದಲ್ಲಿ ಬಂದಿದ್ದಾಗಿದೆ ಎಂದು 9 ಪುಟಗಳ ವರದಿ ನೀಡಿದ್ದಾರೆ. ಅಲ್ಲದೇ 20 ಎಕರೆ ಪೈಕಿ 14 ಎಕರೆಯನ್ನು 1973ರಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ 4 ಮಂದಿಗೆ ಮಂಜೂರು ಮಾಡಲಾಗಿದ್ದು, 2001 ರಲ್ಲಿ ಖಾತೆ ಕೂಡ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.