ಮಂಡ್ಯ: "ರಾಜ್ಯದ 226 ತಾಲೂಕುಗಳನ್ನು ಬರಗಾಲಪೀಡಿತ ತಾಲೂಕುಗಳು ಎಂದು ಘೋಷಿಸಿದ್ದೇವೆ. ಈಗ ಹಂತ ಹಂತವಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಕೊಡುವ ಹಂತಕ್ಕೆ ಬಂದಿದ್ದೇವೆ" ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಳವಳ್ಳಿಯ ಹಲಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಘೋಷಣೆಯನ್ನು ನಾವು ಕಾಯುತ್ತಿದ್ದೇವೆ. ನಂತರ ನಾವು ಕ್ಯಾಬಿನೆಟ್ನಲ್ಲಿ ರೈತರಿಗೆ ಏನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ " ಎಂದು ಹೇಳಿದರು.
"ರಾಜ್ಯದ ಜನರಿಗೆ ವಿವಿಧ ರೀತಿಯಲ್ಲಿ ಪರಿಹಾರ ನೀಡಲು 75 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರೂಪಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಎಲ್ಲಿ ಹೆಚ್ಚು ಬರಗಾಲ ಇದೆ ಎಂದು ತಿಳಿದುಕೊಂಡು ಅಂತಿಮ ವರದಿಯನ್ನು ಕೊಡಬೇಕು ಎಂದು ಹೇಳಿದ್ದಾರೆ. ಹಾಗಾಗಿ ಮಳವಳ್ಳಿ ಮತ್ತು ಮದ್ದೂರಿನಲ್ಲಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕೆಲಸ ಮಾಡುತ್ತಿದ್ದೇನೆ" ಎಂದರು.
ಬರಕ್ಕೆ ಸಂಬಂಧಪಟ್ಟಂತೆ ಕ್ರಿಯಾ ಯೋಜನೆಯೇ ಆಗಿಲ್ಲ, ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, "ವಿಜಯೇಂದ್ರನಿಗೆ ಏನು ಗೊತ್ತು, ಅವರು ಇನ್ನು ಮಗು. ತಂದೆ ಮುಖ್ಯಮಂತ್ರಿಯಾಗಿದ್ದಾಗ, ಅವರೊಂದಿಗೆ ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ಮಾತ್ರಕ್ಕೆ ಇಡೀ ರಾಜ್ಯದ ಎಲ್ಲ ವಿಚಾರವನ್ನು ತಿಳಿದುಕೊಂಡಿದ್ದೇನೆ ಎಂದುಕೊಂಡರೇ ನಾವು ಏನು ಮಾಡೋಕ್ಕಾಗುತ್ತೆ" ಎಂದು ತಿರುಗೇಟು ನೀಡಿದರು.