ಕರ್ನಾಟಕ

karnataka

ETV Bharat / state

ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ ಕುಸಿತ: ಬೇಸಿಗೆ ಬೆಳೆ ಬೆಳೆಯದಂತೆ ಕೃಷಿ ಸಚಿವರ ಮನವಿ - Chaluvaraya Swamy

ಬೆಳೆ ಪರಿಹಾರದಲ್ಲಿ ರೈತರಿಗೆ ಅನ್ಯಾಯ ಅಗಲ್ಲ. ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ ಕುಸಿತ ಕಂಡಿದ್ದು, ರೈತರು ಬೇಸಿಗೆ ಬೆಳೆ ಬೆಳೆಯಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.

Chaluvaraya Swamy
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

By ETV Bharat Karnataka Team

Published : Dec 23, 2023, 10:53 AM IST

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ : ರೈತರ ಜೀವನಾಡಿ ಕನ್ನಂಬಾಡಿ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಬರಗಾಲದ ಛಾಯೆ ಆವರಿಸಿದೆ. ಪ್ರಾಧಿಕಾರದ ಆದೇಶದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜನವರಿಯಿಂದ 1,030 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶ ನೀಡಲಾಗಿದ್ದು, ಬೇಸಿಗೆಗೂ ಮುನ್ನವೇ ಕೆರೆಕಟ್ಟೆಗಳು ಖಾಲಿಯಾಗಿವೆ. ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಕಾವೇರಿ ಸಭಾಂಗಣದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಗೆ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬಿಟ್ಟರೆ ಉಳಿದಂತೆ ಮಂಡ್ಯ ಜಿಲ್ಲೆಯ ನಾಲ್ವರು ಶಾಸಕರು ಗೈರಾಗಿದ್ದರು. ಹಾಗೆಯೇ, ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಭಾಗಿಯಾಗಿರಲಿಲ್ಲ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಚಲುವರಾಯಸ್ವಾಮಿ ಕಾವೇರಿ ನೀರಿನ ಬಗ್ಗೆ ಮಾಹಿತಿ ಪಡೆದರು.

ಸಭೆ ಬಳಿಕ ಮಾತನಾಡಿದ ಸಚಿವರು, "ಸುಪ್ರೀಂ ಕೋರ್ಟ್ ಪ್ರಕಾರ ಎರಡು ಕಮಿಟಿ ರಚನೆಯಾಗಿದೆ. ಸಿಡಬ್ಲ್ಯೂಆರ್​ಸಿ, ಸಿಡಬ್ಲ್ಯೂಎಂಎ ಎರಡೂ ಆದೇಶವನ್ನು ಇಂಪ್ಲಿಮೆಂಟ್ ಮಾಡಲು ಮುಂದಾಗಿದೆ. ರೈತರ ಹಿತ ಕಾಪಾಡುವ ದೃಷ್ಟಿಯಿಂದ ಲೀಗಲ್ ಟೀಂ ಜೊತೆ ಮಾತನಾಡಿದ್ದೇವೆ. ಭತ್ತದ ಬೆಳೆ ಕಟಾವಿಗೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ 16 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಬೇಸಿಗೆಯಲ್ಲಿ 2 ರಿಂದ 3 ಟಿಎಂಸಿ ಆವಿಯಾಗಿ ಹೋಗುತ್ತೆ. 13 ಟಿಎಂಸಿ ಮಾತ್ರ ಉಳಿಯುತ್ತದೆ. ತಿಂಗಳಿಗೆ 2.1 ಟಿಎಂಸಿ ನೀರನ್ನು ಕುಡಿಯಲು ಹಾಗೂ ಬೆಳೆಗಾಗಿ ಅಂದಾಜು ಮಾಡಲಾಗಿದೆ. ಜೂನ್​ವರೆಗೂ 16 ಟಿಎಂಸಿ ಕುಡಿಯಲು ನೀರು ಬೇಕಾಗುತ್ತದೆ. ಮೇ, ಜೂನ್​ನಲ್ಲಿ ಮಳೆ ಬರದಿದ್ದರೆ ಲಾಸ್ಟ್ ಎರಡೂ ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಸಮಿತಿ ಮೂಲಕ ರೈತರಿಗೆ ಬೇಸಿಗೆ ಬೆಳೆ ಬೆಳೆಯಬಾರದು ಎಂದು ವಿನಂತಿ ಮಾಡ್ತೇನೆ, ತೊಂದರೆಗೆ ಸಿಲುಕುವುದು ಬೇಡ" ಎಂದರು.

ಮುಂಗಾರಿನಲ್ಲಿ ಪೂರ್ಣ ಪ್ರಮಾಣದ ನೀರು ಕೊಟ್ಟಿದ್ದೇವೆ. ಈಗಾಗಲೇ ಬರ ಘೋಷಣೆಯಾಗಿದೆ. ಬರ ಪರಿಹಾರ ಕೊಡಲು ಕೇಂದ್ರ ತಿಳಿಸಿದೆ. ಕೇಂದ್ರದ ಪರಿಹಾರ ತಡವಾಗಿದ್ದರಿಂದ ಎಕರೆಗೆ 2 ಸಾವಿರ ರೂ. ಕೊಡಲು ಸಿಎಂ ಘೋಷಣೆ ಮಾಡಿದ್ದಾರೆ. ಪರಿಹಾರದಲ್ಲಿ ರೈತರಿಗೆ ಅನ್ಯಾಯ ಅಗಲ್ಲ. ಪ್ರಾಧಿಕಾರಗಳಿಂದ ಕರ್ನಾಟಕಕ್ಕೆ ಹಿನ್ನಡೆ ಆಗುತ್ತಿದೆ. ನಮ್ಮ ಟೆಕ್ನಿಕಲ್ ಟೀಮ್ ಅವರಿಗೆ ಸಾಕಷ್ಟು ಮನವರಿಕೆ ಮಾಡಿ ಕೊಟ್ಟಿದೆ. ಪ್ರಾಧಿಕಾರಕ್ಕೆ ಸ್ಯಾಟಲೈಟ್ ಮಾಹಿತಿ ಇದೆ. ರೈತರ ಬೆಳೆ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇವೆ. ಹೋರಾಟ ನಿಲ್ಲಿಸಿ ನಮ್ಮ ಜೊತೆ ಸಹಕರಿಸಿ ಎಂದರು.

ಇದನ್ನೂ ಓದಿ :ಮಂಡ್ಯ : ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು

ನಾವು ತಮಿಳುನಾಡಿಗೆ ಎರಡು ತಿಂಗಳಿಂದ ನೀರು ಬಿಡ್ತಿಲ್ಲ. ಒಂದು ಹನಿ ನೀರನ್ನು ಸಹ ಕೊಟ್ಟಿಲ್ಲ. ನಮಗೆ ಕುಡಿಯುವ ನೀರಿನ ಕೊರತೆ ಇದೆ. ತಮಿಳುನಾಡಿಗೆ ಬಿಡೋದು ಹೇಗೆ ಸಾಧ್ಯ. ರೈತರು ಹೋರಾಟ ಕೈ ಬಿಡಲು ಮನವಿ ಮಾಡ್ತೇವೆ ಎಂದರು. ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ತಕ್ಷಣವೇ ಭತ್ತ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಕೊಬ್ಬರಿ ಖರೀದಿ ಕೇಂದ್ರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details